ಕೊಲಂಬೊ : ನವದೆಹಲಿಯ ಸೇನಾ ನೆಲೆಗಳ ಮೇಲೆ ಬೇಹುಗಾರಿಕೆ ನಡೆಸಬಹುದು ಎಂಬ ಭಾರತದ ಕಳವಳದ ಹೊರತಾಗಿಯೂ ಆಗಸ್ಟ್ 16ರಂದು ದಕ್ಷಿಣ ಬಂದರಾದ ಹಂಬಂಟೋಟಾದಲ್ಲಿ ಹೈಟೆಕ್ ಮತ್ತು ವಿವಾದಾತ್ಮಕ ಚೀನೀ ಸಂಶೋಧನಾ ಹಡಗನ್ನ ನಿಲ್ಲಿಸಲು ಶ್ರೀಲಂಕಾ ಸರ್ಕಾರ ಅನುಮತಿ ನೀಡಿದೆ.
ಚೀನಾದ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಉಪಗ್ರಹ ಟ್ರ್ಯಾಕಿಂಗ್ ಹಡಗು ‘ಯುವಾನ್ ವಾಂಗ್ 5’ ಈ ಮೊದಲು ಗುರುವಾರ ಆಗಮಿಸಬೇಕಿತ್ತು ಮತ್ತು ಮರುಪೂರಣಕ್ಕಾಗಿ ಆಗಸ್ಟ್ 17 ರವರೆಗೆ ಬಂದರಿನಲ್ಲಿರಬೇಕಿತ್ತು.
ಯುವಾನ್ ವಾಂಗ್ 5 ಅನ್ನು ಅಂತರರಾಷ್ಟ್ರೀಯ ಹಡಗು ಮತ್ತು ವಿಶ್ಲೇಷಣಾ ತಾಣಗಳು ಸಂಶೋಧನೆ ಮತ್ತು ಸಮೀಕ್ಷೆ ಹಡಗು ಎಂದು ಬಣ್ಣಿಸಿವೆ. ಆದ್ರೆ, ಭಾರತೀಯ ವರದಿಗಳ ಪ್ರಕಾರ ಇದು ದ್ವಿ-ಬಳಕೆಯ ಬೇಹುಗಾರಿಕೆ ಹಡಗಾಗಿದೆ.
ಭಾರತವು ಭದ್ರತಾ ಕಳವಳಗಳನ್ನ ಎತ್ತಿದ ನಂತರ ಹಡಗಿನ ಭೇಟಿಯನ್ನ ಮುಂದೂಡುವಂತೆ ಶ್ರೀಲಂಕಾದ ವಿದೇಶಾಂಗ ಸಚಿವಾಲಯವು ಕಳೆದ ವಾರ ಚೀನಾ ರಾಯಭಾರ ಕಚೇರಿಗೆ ಮನವಿ ಮಾಡಿತ್ತು. ತದನಂತರ, ಹಡಗು ಯೋಜಿಸಿದಂತೆ ಗುರುವಾರ ಹಂಬಂಟೋಟಾ ಬಂದರಿನಲ್ಲಿ ನಿಲ್ಲಲಿಲ್ಲ. ಅಧಿಕಾರಿಗಳ ಪ್ರಕಾರ, ಸರ್ಕಾರವು ಅಂತಿಮವಾಗಿ ಹಡಗನ್ನು ಬಂದರಿನಲ್ಲಿ ನಿಲ್ಲಿಸಲು ಅನುಮತಿಸಿದೆ. ಇದು ಈಗ ಆಗಸ್ಟ್ 16 ರಂದು ತಲುಪಲಿದ್ದು, ಆಗಸ್ಟ್ 22 ರವರೆಗೆ ಬಂದರಿನಲ್ಲಿ ಉಳಿಯುತ್ತದೆ ಎಂದು ಹೇಳಿದರು.