ಅಮೃತಸರ : ಅಮೃತಸರ ಜಿಲ್ಲೆಯ ಚೀಚಾ ಭಕ್ನಾ ಗ್ರಾಮದಲ್ಲಿ ಬುಧವಾರ ಪೊಲೀಸರೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ದರೋಡೆಕೋರರು ಹತರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪಂಜಾಬ್ನ ಅಟ್ಟಾರಿ ಗಡಿಯ ಬಳಿ ಎನ್ಕೌಂಟರ್ ನಡೆಯುತ್ತಿದ್ದು, ಗಾಯಕ ಮತ್ತು ರಾಜಕಾರಣಿ ಸಿಧು ಮೂಸ್ ವಾಲಾ ಅವರ ಹತ್ಯೆಯೊಂದಿಗೆ ನಂಟು ಹೊಂದಿರುವ ಇಬ್ಬರು ದರೋಡೆಕೋರರು ಈ ಎನ್ಕೌಂಟರ್ನಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.
ಮನ್ಪ್ರೀತ್ ಸಿಂಗ್ ಅಲಿಯಾಸ್ ಮನ್ನು ಕುಸಾ ಮತ್ತು ಜಗ್ರೂಪ್ ಸಿಂಗ್ ಅಲಿಯಾಸ್ ರೂಪಾ ಎಂಬ ವ್ಯಕ್ತಿಗಳು ಗ್ರಾಮದಲ್ಲಿ ಅಡಗಿಕೊಂಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ದೊರೆತ ನಂತ್ರ ಈ ಎನ್ಕೌಂಟರ್ ನಡೆದಿದೆ. ಎರಡೂ ಕಡೆಯಿಂದ ನೂರಾರು ಸುತ್ತು ಗುಂಡು ಹಾರಿಸಲಾಗಿದ್ದು, ಕೆಲವು ಪೊಲೀಸರು ಸಹ ಗುಂಡೇಟಿನಿಂದ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪೊಲೀಸರು ಹಳ್ಳಿಯನ್ನು ಸುತ್ತುವರೆದಿದ್ದಾರೆ ಮತ್ತು ದರೋಡೆಕೋರರು ಅಡಗಿದ್ದಾರೆ ಎಂದು ಹೇಳಲಾದ ಫಾರ್ಮ್ಹೌಸ್ಗೆ ಹೋಗುವ ರಸ್ತೆಯಲ್ಲಿ ಹೋಗಲು ಜನರಿಗೆ ಅವಕಾಶ ನೀಡುತ್ತಿಲ್ಲ. ಇನ್ನು ಗ್ಯಾಂಗ್ಸ್ಟರ್ ವಿರೋಧಿ ಕಾರ್ಯಪಡೆಯ ಡಿಎಸ್ಪಿ ವಿಕ್ರಮ್ ಬ್ರಾರ್ ಮತ್ತು ಇನ್ಸ್ಪೆಕ್ಟರ್ ಶಿವ ಕುಮಾರ್ ಪೊಲೀಸ್ ತಂಡದ ನೇತೃತ್ವ ವಹಿಸಿದ್ದರು.
ಅಂದ್ಹಾಗೆ, ಸಿಧು ಮೂಸ್ವಾಲಾ ಎಂದೂ ಕರೆಯಲ್ಪಡುವ ಶುಭ್ದೀಪ್ ಸಿಂಗ್ ಸಿಧು ಅವ್ರನ್ನ ಮೇ 29ರಂದು ಪಂಜಾಬ್ನ ಮಾನಸ ಜಿಲ್ಲೆಯಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಪಂಜಾಬ್ ಪೊಲೀಸರು ಇತರ 424 ಜನರೊಂದಿಗೆ ಅವರ ಭದ್ರತೆಯನ್ನ ಹಿಂತೆಗೆದುಕೊಂಡ ಒಂದು ದಿನದ ನಂತರ ಈ ಘಟನೆ ನಡೆದಿದೆ.