ಚೆನ್ನೈ: ಕಳೆದ ಎರಡು ದಿನಗಳಿಂದ ಇಡೀ ದೇಶದ ಗಮನ ತಮಿಳುನಾಡು ರಾಜಕೀಯದತ್ತ ನೆಟ್ಟಿದೆ. ದ್ರಾವಿಡ ಕೋಟೆಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳನ್ನು ಮಣಿಸಿ, ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ನಟ ವಿಜಯ್ ನೇತೃತ್ವದ ಟಿವಿಕೆ (Tamilaga Vettri Kazhagam) ಈಗ ಸರ್ಕಾರ ರಚನೆಗೆ ಸಜ್ಜಾಗಿದೆ.
ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಒಟ್ಟು 108 ಸ್ಥಾನಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದಿದ್ದರೂ, ಟಿವಿಕೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ರಚಿಸಲು ರಾಜ್ಯಪಾಲರ ಬಳಿ ಹಕ್ಕು ಮಂಡಿಸಿರುವ ವಿಜಯ್, ಬಹುಮತ ಸಾಬೀತುಪಡಿಸಲು ಎರಡು ವಾರಗಳ ಕಾಲಾವಕಾಶ ಕೋರಿದ್ದಾರೆ ಎಂದು ವರದಿಯಾಗಿದೆ.
ನಾಳೆಯೇ ಮುಹೂರ್ತ ನಿಗದಿ?
ವಿಶೇಷವೆಂದರೆ, ವಿಜಯ್ ಅವರು ಮೇ 7ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. 2021ರಲ್ಲಿ ಎಂ.ಕೆ. ಸ್ಟಾಲಿನ್ ಅವರು ಕೂಡ ಇದೇ ಮೇ 7ರಂದು ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಅದೇ ದಿನಾಂಕದಂದು ತಾವೂ ಪದಗ್ರಹಣ ಮಾಡುವ ಮೂಲಕ ವಿಜಯ್ ಹೊಸ ರಾಜಕೀಯ ಪರ್ವಕ್ಕೆ ಮುನ್ನುಡಿ ಬರೆಯಲಿದ್ದಾರೆ.
ಸಂಪುಟದಲ್ಲಿ ಯಾರಿಗೆ ಅವಕಾಶ?
ಮೇ 7ರಂದೇ ವಿಜಯ್ ಅವರೊಂದಿಗೆ ನೂತನ ಶಾಸಕರು ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ನಿಟ್ಟಿನಲ್ಲಿ ಸಚಿವ ಸಂಪುಟ ಸೇರಲಿರುವ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆಗಾಗಿ ವಿಜಯ್ ಅವರು ಪಕ್ಷದ ಚುನಾವಣಾ ತಂತ್ರಜ್ಞ ಜಾನ್ ಆರೋಕ್ಯಸಾಮಿ ಅವರೊಂದಿಗೆ ಸತತ ಸಮಾಲೋಚನೆ ನಡೆಸುತ್ತಿದ್ದಾರೆ.
ಗೆದ್ದ 107 ಶಾಸಕರು (ವಿಜಯ್ ಹೊರತುಪಡಿಸಿ) ನಿನ್ನೆ ಪಣಯೂರ್ ಕಚೇರಿಯಲ್ಲಿ ವಿಜಯ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಅಧಿಕಾರ ಸ್ವೀಕಾರದವರೆಗೆ ಶಾಸಕರ ಕುದುರೆ ವ್ಯಾಪಾರ ತಡೆಯಲು ಚೆನ್ನೈನ ಪ್ರತಿಷ್ಠಿತ ಸ್ಟಾರ್ ಹೋಟೆಲ್ನಲ್ಲಿ ಅವರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಟಿವಿಕೆ ಯೋಜನೆ ರೂಪಿಸಿದೆ. ಒಟ್ಟಿನಲ್ಲಿ, ಬೆಳ್ಳಿಪರದೆಯ ‘ದಳಪತಿ’ ಈಗ ತಮಿಳುನಾಡಿನ ನೈಜ ‘ನಾಯಕ’ನಾಗಿ ಗದ್ದುಗೆ ಏರಲು ಕ್ಷಣಗಣನೆ ಆರಂಭವಾಗಿದೆ.








