ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2025ರ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ವಿದ್ಯುತ್ ದೀಪಾಲಂಕಾರ ಹಾಗೂ ಡ್ರೋನ್ ಪ್ರದರ್ಶನದ ಪೋಸ್ಟರ್ ಹಾಗೂ ದೀಪಾಲಂಕಾರದ ಟೀಸರ್ ಅನ್ನು ಇಂದು ಬಿಡುಗಡೆಗೊಳಿಸಲಾಯಿತು.
ಅರಮನೆ ಆಡಳಿತ ಮಂಡಳಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್)ದ ವತಿಯಿಂದ ನಡೆಸಲಾಗುವ ದಸರಾ ದೀಪಾಲಂಕಾರ ಹಾಗೂ ಡ್ರೋನ್ ಪ್ರದರ್ಶನದ ಪೋಸ್ಟರ್ ಬಿಡುಗಡೆಗೊಳಿಸಿ, ಟೀಸರ್ ಅನಾವರಣಗೊಳಿಸಿದರು.
ದಸರಾ ಮಹೋತ್ಸವದ ಸಂಭ್ರಮಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಡ್ರೋನ್ ಪ್ರದರ್ಶನ ಈ ಬಾರಿ ಮತ್ತಷ್ಟು ಆಕರ್ಷಣೀಯವಾಗಿರಲಿದೆ. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸೆ.28, 29 ಮತ್ತು ಅಕ್ಟೋಬರ್ 1 ಮತ್ತು 2ರಂದು ಡ್ರೋನ್ ಪ್ರದರ್ಶನ ನಡೆಸಲಾಗುತ್ತಿದೆ. ಕಳೆದ ಬಾರಿ 1500 ಡ್ರೋನ್ ಬಳಸಿಕೊಂಡು ಡ್ರೋನ್ ಪ್ರದರ್ಶನ ನಡೆಸಲಾಗಿತ್ತು, ಈ ಬಾರಿ 3000 ಡ್ರೋನ್ ಬಳಸಿಕೊಂಡು ಪ್ರದರ್ಶನ ನಡೆಸಲಾಗುತ್ತಿದೆ.
ಎಂದಿನಂತೆ ಈ ಬಾರಿಯೂ ಸೆಸ್ಕ್ ವತಿಯಿಂದ ದೀಪಾಲಂಕಾರ ಮಾಡಲಾಗುತ್ತಿದ್ದು, ನಗರದ 135 ಕಿ.ಮೀ ವ್ಯಾಪ್ತಿಯ ರಸ್ತೆಗಳು ಹಾಗೂ 118 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ. ಅವುಗಳೊಂದಿಗೆ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ಆಕರ್ಷಕ ಪ್ರತಿಕೃತಿಗಳನ್ನು ಇರಿಸಲಾಗುತ್ತದೆ. ದೀಪಾಲಂಕಾರಕ್ಕಾಗಿ 300 ಕಿಲೋ ವ್ಯಾಟ್ಗಳ, 257520 ಯೂನಿಟ್ಗಳ ವಿದ್ಯುತ್ ಬಳಕೆ ಮಾಡಲಾಗುತ್ತಿದೆ. ಈ ಬಾರಿಯ ದಸರಾ ವಿದ್ಯುತ್ ದೀಪಾಲಂಕಾರದಲ್ಲಿ ಸೆಸ್ಕ್ ವತಿಯಿಂದ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಆ ಮೂಲಕ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.