ಘಾಜಿಯಾಬಾದ್:ಉತ್ತರ ಪ್ರದೇಶದ ಪೊಲೀಸರು ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳು ಜಂಟಿ ಕಾರ್ಯಾಚರಣೆ ನಡೆಸಿ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಜೊತೆ ಸಂಪರ್ಕ ಹೊಂದಿದ್ದ ಬೃಹತ್ ಗೂಢಚಾರಿ ಜಾಲವನ್ನು (Spy Network) ಪತ್ತೆಹಚ್ಚಿವೆ. ರಾಜ್ಯದ ವಿವಿಧೆಡೆ ದಾಳಿ ನಡೆಸಿ ಇದುವರೆಗೆ ಒಟ್ಟು 22 ಮಂದಿಯನ್ನು ಬಂಧಿಸಲಾಗಿದ್ದು, ಇವರು ದೇಶದ ಪ್ರಮುಖ ಸೇನಾ ನೆಲೆಗಳು ಮತ್ತು ಆಯಕಟ್ಟಿನ ಪ್ರದೇಶಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ.
ಬಂಧಿತ ಆರೋಪಿಗಳು ಪಾಕಿಸ್ತಾನದಲ್ಲಿರುವ ತಮ್ಮ ಹ್ಯಾಂಡ್ಲರ್‌ಗಳ ಸೂಚನೆಯಂತೆ ಅತ್ಯಂತ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದರು. ಈ ಜಾಲವು ಸೇನಾ ಚಲನವಲನಗಳನ್ನು ಗಮನಿಸಲು ಪ್ರಮುಖ ರಸ್ತೆಗಳು ಮತ್ತು ಸೇನಾ ತುಕಡಿಗಳ ಬಳಿ ಸೋಲಾರ್ ಚಾಲಿತ ಸಣ್ಣ ಸಿಸಿಟಿವಿ ಕ್ಯಾಮೆರಾಗಳನ್ನು ರಹಸ್ಯವಾಗಿ ಅಳವಡಿಸಿತ್ತು. ಇದರ ನೇರ ದೃಶ್ಯಗಳನ್ನು (Live Feed) ಪಾಕಿಸ್ತಾನಕ್ಕೆ ರವಾನಿಸುತ್ತಿದ್ದರು.
ಬಂಧಿತರಲ್ಲಿ ಕೆಲವರು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಸೇರಿದಂತೆ ಹಲವು ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಭದ್ರತಾ ವ್ಯವಸ್ಥೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸಿದ್ದರು.ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಮೂಲಕ ಯುವಕರನ್ನು ಸಂಪರ್ಕಿಸಿ, ಹಣದ ಆಮಿಷವೊಡ್ಡಿ ಈ ಜಾಲಕ್ಕೆ ಸೇರಿಸಿಕೊಳ್ಳಲಾಗುತ್ತಿತ್ತು. ಪ್ರತಿ ಮಾಹಿತಿಗೆ ಇವರಿಗೆ 5,000 ದಿಂದ 20,000 ರೂಪಾಯಿಗಳವರೆಗೆ ಹಣ ಪಾವತಿಸಲಾಗುತ್ತಿತ್ತು.








