ಬೆಂಗಳೂರು : ಯುವಕನೊಬ್ಬ ಇನ್ಸ್ಟಾಗ್ರಾಮ್ ನಲ್ಲಿ ಯುವತಿಯೊಂದಿಗೆ ಸ್ನೇಹ ಬೆಳೆಸಿ, ಬಳಿಕ ಪ್ರೀತಿಗೆ ತಿರುಗಿದ ನಂತರ ಮದುವೆಯಾಗುವುದಾಗಿ ನಂಬಿಸಿ ಬಲವಂತದಿಂದ ಎರಡು ಬಾರಿ ಅತ್ಯಾಚಾರ ಮಾಡಿದ್ದು ಅಲ್ಲದೆ, ಯುವತಿ ಪ್ರೆಗ್ನೆಂಟ್ ಆದಾಗ ಗರ್ಭಪಾತ ಕೂಡ ಮಾಡಿಸಿದ್ದಾನೆ ಎಂದು ಯುವತಿಯ ದೂರಿನ ಮೇಲೆ ಇದೀಗ ಯುವಕನನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ.
ಹೌದು ಛತ್ತೀಸ್ಗಢ ಮೂಲದ ಯುವತಿ ಬೆಂಗಳೂರಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. 2021ರಲ್ಲಿ ಇನ್ಸ್ಟಾಗ್ರಾಂನಲ್ಲಿ ಕೇರಳ ಮೂಲದ ಬಿಲಾಲ್ ರಫೀಕ್ ಎಂಬಾತನ ಪರಿಚಯವಾಗಿತ್ತು. ನಂತರ ಪರಸ್ಪರ ಪ್ರೀತಿಸಲಾರಂಭಿಸಿದ್ದೆವು. ಈ ಸಂದರ್ಭದಲ್ಲಿ ತನ್ನನ್ನು ಮದುವೆಯಾಗುವುದಾಗಿ ನಂಬಿಸಿದ್ದ ಬಿಲಾಲ್ ರಫೀಕ್ 2 ಬಾರಿ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳಸಿದ್ದ.
ಎರಡೂ ಬಾರಿಯೂ ತಾನು ಗರ್ಭಿಣಿಯಾದಾಗ ಆತನೇ ಪುಸಲಾಯಿಸಿ ಗರ್ಭಪಾತ ಮಾಡಿಸಿದ್ದ ಎಂದು ಯುವತಿ ತಿಳಿಸಿದ್ದಾಳೆ. 2024ರಲ್ಲಿ ಆರೋಪಿಯಿಂದ 3ನೇ ಬಾರಿ ಗರ್ಭಿಣಿಯಾದಾಗ ತನ್ನ ಒತ್ತಾಯದ ಕಾರಣಕ್ಕೆ ಆರೋಪಿ ಮದುವೆಗೆ ಸಮ್ಮತಿಸಿದ್ದ. ಎರಡೂ ಕುಟುಂಬಸ್ಥರು ಮದುವೆ ಮಾಡಿಕೊಳ್ಳಲು ಒಪ್ಪಿಗೆ ನೀಡಿದ್ದರು. ಬಳಿಕ ಆರೋಪಿಯ ಪೋಷಕರು ಹಾಗೂ ಸಹೋದರಿ ಕರೆ ಮಾಡಿ, ತಾವು ಮದುವೆಗೆ ಒಪ್ಪುವುದಿಲ್ಲ ಎನ್ನುತ್ತಾ ತನಗೆ ಅಸಭ್ಯವಾಗಿ ನಿಂದಿಸಿ, ಜಾತಿನಿಂದನೆ ಮಾಡಿದ್ದಾರೆ.
ಮದುವೆಗೆ ಯತ್ನಿಸಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ನೊಂದ ಯುವತಿ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಸಂತ್ರಸ್ತ ಯುವತಿಯ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಗೋವಿಂದಪುರ ಠಾಣೆ ಪೊಲೀಸರು, ಸದ್ಯ ಆರೋಪಿ ಬಿಲಾಲ್ ರಫೀಕ್ನನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.