ಚಾಮರಾಜನಗರ : ನಾಡಿನ ಪ್ರಸಿದ್ಧ ಯಾತ್ರಾಸ್ಥಳವಾದ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮತ್ತೆ ಚಿರತೆ ದಾಳಿ ನಡೆಸಿದ್ದು, ಪಾಲಕರ ಜೊತೆ ಬಂದಿದ್ದ ಬಾಲಕ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಲಗ್ಗೆರೆ ವಾರ್ಡ್‌ನ ನಿವಾಸಿ ಸುರೇಶ ಎಂಬವರ ಪುತ್ರ ಹರ್ಷಿತ್ ಚಿರತೆ ದಾಳಿಯಿಂದ ಮೃತಪಟ್ಟಿದ್ದಾನೆ.
ಲಗ್ಗೆರೆ ವಾರ್ಡ್‌ನ ನಿವಾಸಿಗಳು ಶನಿವಾರ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ ಪಡೆದ ವಾಸ್ತವ್ಯ ಹೂಡಿದ್ದರು. ಇಂದು ಬೆಳಗ್ಗೆ 10ಕ್ಕೂ ಹೆಚ್ಚು ಜನರು ನಾಗಮಲೆಗೆ ತೆರಳುತ್ತಿದ್ದಾಗ ಇಂಡಿಗನತ್ತ ಗ್ರಾಮದ ಸಮೀಪ ಬಾಲಕನ ಮೇಲೆ ಚಿರತೆ ದಾಳಿ ನಡೆಸಿ ಪೊದೆಗೆ ಎಳೆದೊಯ್ದು ಕೊಂದಿದೆ. ಈ ಸಂದರ್ಭದಲ್ಲಿ ಜತೆಗಿದ್ದ ಕುಟುಂಬಸ್ಥರು ಜೋರಾಗಿ ಕಿರುಚಾಡಿದರೂ ಬಿಡದೆ ಎಳೆದೊಯ್ದ ಚಿರತೆ ಬಾಲಕನನ್ನು ಕೊಂದು ಹಾಕಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಪಡೆದು ಶವ ಪತ್ತೆ ಹಚ್ಚಿದ್ದಾರೆ.








