ಬೆಂಗಳೂರು : ಹೆಸರು ಬದಲಾಯಿಸಿಕೊಂಡು ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲೇ ಠಿಕಾಣಿ ಹೂಡಿದ್ದ, ಪಾಕಿಸ್ತಾನ ಪ್ರಜೆಗಳನ್ನು ಇದೀಗ ಎನ್ಐಎ ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಅಧಿಕಾರಿಗಳು ಬೆಚ್ಚಿ ಬೀಳಿಸುವಂತಹ ಹಲವು ಮಾಹಿತಿಗಳು ಬಹಿರಂಗವಾಗಿವೆ.
ಹೌದು ಪ್ರಮುಖ ಆರೋಪಿಯಾಗಿರುವ ಪಾಕಿಸ್ತಾನ ಪ್ರಜೆ ರಶೀದ್ ಅಲಿ ಸಿದ್ಧಕಿ ಮತ್ತು ಈತನ ಕುಟುಂಬಸ್ಥರ ಬಳಿ ಭಾರತದ ಪಾಸ್‌ಪೋರ್ಟ್ ಪತ್ತೆಯಾಗಿದೆ. ಆತನ ಕುಟುಂಬ ಭಾರತಕ್ಕೆ ಅಕ್ರಮವಾಗಿ ನುಸುಳಲು, ಭಾರತೀಯ ಪಾಸ್‌ಪೋರ್ಟ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಡಿಎಲ್ ಎಲ್ಲವನ್ನು ಹೊಂದಲು ಮೆಹದಿ ಫೌಂಡೇಷನ್ನ ಪ್ರಮುಖ ವ್ಯಕ್ತಿ ಪರ್ವೇಜ್ ಸಹಾಯ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಜಿಗಣಿ ಪೊಲೀಸರು ಪರ್ವೇಜ್ ಮತ್ತು ಇತನ ಸಂಪರ್ಕದಲ್ಲಿದ್ದವವರಿಗಾಗಿ ಹುಡುಕಾಟ ನಡೆಸಿದ್ದಾರೆ. ಪಾಕಿಸ್ತಾನ ಪ್ರಜೆ ರಶೀದ್ ಅಲಿ ಸಿದ್ಧಕಿಗೆ ಮುಂಬೈ ಮತ್ತು ದೆಹಲಿಯಲ್ಲಿ ಹಲವರು ಪರಿಚಯಸ್ಥರಿದ್ದಾರೆ. ಹೀಗಾಗಿ, ಎರಡು ಪೊಲೀಸ್ ತಂಡ ಮುಂಬೈ ಮತ್ತು ದೆಹಲಿಗೆ ತೆರಳಿದೆ. ರಶೀದ್ ಕುಟುಂಬದವರ ಸಂಪರ್ಕದಲ್ಲಿರುವವರಿಗಾಗಿ ಶೋಧ ನಡೆಸುತ್ತಿವೆ.
ನಿನ್ನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಬಳಿ ಪಾಕಿಸ್ತಾನ ಪ್ರಜೆ ಸೇರಿದಂತೆ ನಾಲ್ವರು ವಿದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದರು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ. ಪಾಕಿಸ್ತಾನ ಪ್ರಜೆ ರಷೀದ್ ಸಿದ್ದಿಕಿ ಅಲಿಯಾಸ್ ಶಂಕರ್ ಶರ್ಮಾ (48), ಆಯುಷಾ ಅನಿಫ್ ಅಲಿಯಾಸ್ ಆಶಾ ಶರ್ಮಾ (38), ಮೊಹಮ್ಮದ್ ಹನೀಫ್ ಅಲಿಯಾಸ್ ರಾಮ್ ಬಾಬಾ ಶರ್ಮಾ (73), ರುಬೀನಾ ಅಲಿಯಾಸ್ ರಾಣಿ ಶರ್ಮಾ (61) ಬಂಧಿತರೆಂದು ತಿಳಿದುಬಂದಿದೆ.