ಮಂಡ್ಯ : ತಾಯಿ ಕ್ಷುಲ್ಲಕ ಕಾರಣಕ್ಕೆ ಬೈದರೆಂದು ಬೇಸರಗೊಂಡ ಇಬ್ಬರು ಅಪ್ರಾಪ್ತ ಸಹೋದರಿಯರು ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿರುವ ಆಘಾತಕಾರಿ ಘಟನೆಯೊಂದು ಮಂಡ್ಯ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪೋಷಕರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.
ನಾಪತ್ತೆಯಾದ ಸಹೋದರಿಯರು: ಗ್ರಾಮದ ನಿವಾಸಿ ರಾಮಚಂದ್ರ ಎಂಬುವವರ ಪುತ್ರಿಯರಾದ ಸುಜಾತ (16) ಹಾಗೂ ರುಕ್ಮಿಣಿ (14) ನಾಪತ್ತೆಯಾದ ದುರ್ದೈವಿ ಸಹೋದರಿಯರು. ಇಬ್ಬರೂ ಇನ್ನೂ ಅಪ್ರಾಪ್ತ ವಯಸ್ಸಿನವರಾಗಿದ್ದು, ಮನೆಯಲ್ಲಿ ತಾಯಿ ಯಾವುದೋ ವಿಷಯಕ್ಕೆ ಗದರಿದ್ದನ್ನೇ ದೊಡ್ಡದಾಗಿ ಪರಿಗಣಿಸಿ, ಮನನೊಂದು ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮನಕಲಕುವ ಡೆತ್ ನೋಟ್: ಮನೆ ಬಿಟ್ಟು ಹೋಗುವ ಮುನ್ನ ಸಹೋದರಿಯರಿಬ್ಬರು ಪೋಷಕರನ್ನುದ್ದೇಶಿಸಿ ಡೆತ್ ನೋಟ್ ಒಂದನ್ನು ಬರೆದಿಟ್ಟಿದ್ದಾರೆ. “ಅಮ್ಮ, ಅಪ್ಪ ನಮ್ಮನ್ನು ಕ್ಷಮಿಸಿ. ನಿಮ್ಮ ಕಣ್ಣ ಮುಂದೆ ನಮಗೆ ಸಾಯುವುದಕ್ಕೆ ಆಗುತ್ತಿಲ್ಲ. ಹೀಗಾಗಿ ನಾವು ನಿಮ್ಮಿಂದ ತುಂಬಾ ದೂರ ಹೋಗಿ ಸಾಯುತ್ತಿದ್ದೇವೆ,” ಎಂದು ಪತ್ರದಲ್ಲಿ ಅತ್ಯಂತ ಭಾವುಕರಾಗಿ ಬರೆದಿದ್ದಾರೆ. ಸದ್ಯ ಈ ಪತ್ರವು ಪೋಷಕರ ಕಣ್ಣಲ್ಲಿ ರಕ್ತದ ಕಣ್ಣೀರು ತರಿಸುವಂತೆ ಮಾಡಿದೆ.
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು: ಹೆಣ್ಣುಮಕ್ಕಳು ಬರೆದಿಟ್ಟಿರುವ ಪತ್ರವನ್ನು ಕಂಡು ಆಘಾತಕ್ಕೊಳಗಾದ ತಂದೆ ರಾಮಚಂದ್ರ ಅವರು ತಕ್ಷಣವೇ ಪತ್ರದ ಆಧಾರದ ಮೇಲೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಮಕ್ಕಳ ನಾಪತ್ತೆ ಕುರಿತು ಪೊಲೀಸರು ಸದ್ಯ ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರು ಬಾಲಕಿಯರ ಪತ್ತೆಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ.








