ಬೆಂಗಳೂರು : ರಾಜ್ಯದಲ್ಲಿ ಯಾವಾಗ ಮುಡಾ ಪ್ರಕರಣ ಭಾರಿ ಸದ್ದು ಮಾಡಿತೊ, ಅಂದಿನಿಂದಲೂ ಸಿಎಂ ಕುರ್ಚಿಯ ಮೇಲೆ ಸ್ವಪಕ್ಷದ ನಾಯಕರೇ ಕಣ್ಣು ಇಟ್ಟಿದ್ದಾರೆ. ಅಲ್ಲದೆ ಇತ್ತೀಚೆಗೆ ಕಾಂಗ್ರೆಸ್ಸಿನ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಸಿದ್ದರಾಮಯ್ಯ ಅನುಮತಿ ನೀಡಿದರೆ ಮುಖ್ಯಮಂತ್ರಿ ಆಗುತ್ತೇನೆ ಎಂಬ ಹೇಳಿಕೆ ನೀಡಿದ್ದರು.ಇದೀಗ ಸಚಿವ ಎಂಬಿ ಪಾಟೀಲ್ ಅವರು ಕೂಡ ನನಗೂ ಸಿಎಂ ಆಗಬೇಕೆಂಬ ಆಸೆ ಇದೆ ಆದರೆ ದುರಾಸೆ ಇಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಅಲ್ಲದೆ ಸಚಿವ ಶಿವಾನಂದ ಪಾಟೀಲ್ ಕೂಡ MB ಪಾಟೀಲ್ ಸಿಎಂ ಆಗುವ ವಿಚಾರವಾಗಿ, ನಾನು ಹಿರಿಯನಿದ್ದೇನೆ ಒಂದಲ್ಲ ಒಂದು ದಿನ ಸಿಎಂ ಆಗುತ್ತೇನೆ. ಪಕ್ಷದಲ್ಲಿ ಎಂಬಿ ಪಾಟೀಲ್ ಅವರಿಗಿಂತಲೂ ಸೀನಿಯರ್ಸ್ ಇದ್ದಾರೆ ಅವರಿಗೂ ಸಿಎಂ ಆಗುವ ಆಸೆ ಇರುತ್ತೆ ಎಂದು ತಿಳಿಸಿದರು. ಇದಕ್ಕೆ ಎಂ.ಬಿ ಪಾಟೀಲ್, ಶಿವಾನಂದ್ ಪಾಟೀಲ್ ಸಿಎಂ ಆಗಲ್ಲ ಆದರೆ ವಿಜಯಪುರದಿಂದ ಮುಖ್ಯಮಂತ್ರಿ ಆಗುವುದು ನಾನೇ ಎಂದು ತಿರುಗೇಟು ನೀಡಿದ್ದಾರೆ.
ಪಕ್ಷದಲ್ಲಿ ನನಗಿಂತಲೂ ಹಿರಿಯರು ಇರಬಹುದು ಆದರೆ ನಾನು 1991 ರಿಂದಲೂ ಕೂಡ ಕಾಂಗ್ರೆಸ್ ಪಕ್ಷದಲ್ಲಿ ಇದ್ದು ಇಲ್ಲಿಯವರೆಗೆ ಬಂದಿದ್ದೇನೆ. ಸುಮಾರು 35 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ದುಡಿದಿದ್ದೇನೆ. ಅವರೆಲ್ಲ ಜೆಡಿಎಸ್ ಬಿಜೆಪಿ ಪಕ್ಷದಲ್ಲಿದ್ದು ಇತ್ತೀಚಿಗೆ ಕಾಂಗ್ರೆಸ್ಗೆ ಬಂದವರು ಎಂದು ಎಂಬಿ ಪಾಟೀಲ್ ಸಚಿವ ಶಿವಾನಂದ್ ಪಾಟೀಲ್ ಗೆ ತಿರುಗೇಟು ನೀಡಿದ್ದಾರೆ.
ಇನ್ನು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಮುಡಾ ನಿವೇಶನ ಹಂಚಿಕೆಯಾಗಿದ್ದು ಬಿಜೆಪಿ ಅಧಿಕಾರ ಅವಧಿಯಲ್ಲಿ. ಇದರಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾಲೇನಿದೆ? ಮುಡಾ ಪ್ರಕರಣದಿಂದ ಯಾರು ಕೂಡ ಭಯಗೊಂಡಿಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡುತ್ತಿದ್ದೇವೆ. ನಮಗೆ ಜಯ ಸಿಕ್ಕೇ ಸಿಗುತ್ತದೆ ಹಗಲು ಕನಸು ಬೇಡ ಎಂದು ಸಚಿವ ಎಂಬಿ ಪಾಟೀಲ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.