ದಕ್ಷಿಣ ಕನ್ನಡ: ಜಿಲ್ಲೆಯ ಸುಬ್ರಹ್ಮಣ್ಯ–ಮಂಜೇಶ್ವರ ರಾಜ್ಯ ಹೆದ್ದಾರಿಯ ಸವಣೂರು ಸಮೀಪದ ಚಾಪಳ್ಳ ತಿರುವಿನಲ್ಲಿ ಮಂಗಳವಾರ ಸಂಜೆ ಮೈನಡುಗಿಸುವ ರಸ್ತೆ ಅಪಘಾತ ಸಂಭವಿಸಿದೆ. ಎರಡು ಬೈಕ್‌ಗಳ ನಡುವೆ ನಡೆದ ಈ ಭೀಕರ ಸಂಘರ್ಷದಲ್ಲಿ ಇಬ್ಬರು ಯುವಕರು ದುರ್ಮರಣಕ್ಕೀಡಾಗಿದ್ದು, ಮೃತರ ಕುಟುಂಬದಲ್ಲಿ ಶೋಕದ ಮಡುವು ಆವರಿಸಿದೆ.
ಅಪಘಾತದ ತೀವ್ರತೆಗೆ ಬೈಕ್ ಸವಾರ ಸ್ಥಳದಲ್ಲೇ ಪ್ರಾಣ ಬಿಟ್ಟರೆ, ತೀವ್ರವಾಗಿ ಗಾಯಗೊಂಡಿದ್ದ ಸಹ ಸವಾರನನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಲಾಯಿತಾದರೂ, ಸಾಗಿಸುವ ದಾರಿ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಮೃತ ಯುವಕರನ್ನು ಬಂಟ್ವಾಳ ತಾಲೂಕಿನ ಮಿತ್ತೂರು ಬೊಳ್ಳರಮಜಲು ನಿವಾಸಿ ಪುರಂದರ ಎಂಬುವರ ಪುತ್ರ ಯಜ್ನೇಶ್ (21) ಮತ್ತು ಆರ್ಲಪದವು ನೋಣಯ್ಯ ಭರಣ್ಯ ಎಂಬುವರ ಪುತ್ರ ಜಗನ್ (20) ಎಂದು ಗುರುತಿಸಲಾಗಿದೆ.
ಘಟನೆಯ ವಿವರದಂತೆ, ಚಾಪಳ್ಳದ ಅಪಾಯಕಾರಿ ತಿರುವಿನಲ್ಲಿ ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸ ಎಷ್ಟಿತ್ತೆಂದರೆ ವಾಹನಗಳು ಸಂಪೂರ್ಣ ಜಖಂಗೊಂಡಿವೆ. ಇದೇ ವೇಳೆ ಮೃತರ ಬೈಕ್ ಹಿಂದೆಯೇ ಬರುತ್ತಿದ್ದ ಮತ್ತೊಂದು ಬೈಕ್ ಕೂಡ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಅದರಲ್ಲಿದ್ದ ಇಬ್ಬರು ಸವಾರರಿಗೂ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಧಾವಿಸಿ ಬಂದು ರಕ್ಷಣಾ ಕಾರ್ಯದಲ್ಲಿ ನೆರವಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಣ್ಣ ಮುಂದೆಯೇ ಇಬ್ಬರು ಭರವಸೆಯ ಯುವಕರು ಜೀವ ಕಳೆದುಕೊಂಡಿರುವುದು ಸವಣೂರು ಮತ್ತು ಮಿತ್ತೂರು ಪರಿಸರದಲ್ಲಿ ಭಾರೀ ವಿಷಾದಕ್ಕೆ ಕಾರಣವಾಗಿದೆ.








