ಇಂಫಾಲ: ಮಣಿಪುರದ ಉಕ್ರುಲ್ ಜಿಲ್ಲೆಯಲ್ಲಿ ಇಂದು (ಶುಕ್ರವಾರ) ಮುಂಜಾನೆ ವಿವಿಧ ಸಶಸ್ತ್ರ ಗುಂಪುಗಳ ನಡುವೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಶಾಂತವಾಗಿದ್ದ ಈ ಗುಡ್ಡಗಾಡು ಪ್ರದೇಶದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಪೊಲೀಸ್ ಮೂಲಗಳ ಪ್ರಕಾರ, ಉಕ್ರುಲ್ ಜಿಲ್ಲೆಯ ಸಿನಾಕೈಥಿ ಮತ್ತು ಮುಲ್ಲಂ ಗ್ರಾಮಗಳ ಸಮೀಪ ಈ ಸಂಘರ್ಷ ನಡೆದಿದೆ.
ಗುಂಡಿನ ಚಕಮಕಿ: ಮುಂಜಾನೆ ಸುಮಾರು 5:30ರ ಸುಮಾರಿಗೆ ಎರಡು ಸಮುದಾಯಗಳ ಸಶಸ್ತ್ರ ಗುಂಪುಗಳ ನಡುವೆ ಗುಂಡಿನ ಚಕಮಕಿ ಆರಂಭವಾಯಿತು. ಸುಮಾರು ಗಂಟೆಗಳ ಕಾಲ ಪರಸ್ಪರ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಸಾವನ್ನಪ್ಪಿದ ಮೂವರಲ್ಲಿ ಒಬ್ಬರನ್ನು ತಂಗ್ಖುಲ್ ನಾಗಾ ಸಮುದಾಯದ ಹೊರ್ಷೋಕ್ಮಿ ಜಮಾಂಗ್ (29) ಎಂದು ಗುರುತಿಸಲಾಗಿದೆ. ಉಳಿದ ಇಬ್ಬರು ಕುಕಿ ಸಮುದಾಯಕ್ಕೆ ಸೇರಿದವರು ಎಂದು ಶಂಕಿಸಲಾಗಿದ್ದು, ಮುಲ್ಲಂ ಮತ್ತು ಶೋಂಗ್‌ಫೆಲ್ ಗ್ರಾಮಗಳ ನಡುವೆ ಅವರ ಮೃತದೇಹಗಳು ಪತ್ತೆಯಾಗಿವೆ.
ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಗಡಿ ಭದ್ರತಾ ಪಡೆ (BSF) ಮತ್ತು ರಾಜ್ಯ ಪೊಲೀಸರು ಧಾವಿಸಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಪ್ರಸ್ತುತ ಈ ಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.








