ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದ ವೇಳೆ ಮತಗಟ್ಟೆಯೊಂದರಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಕರ್ತವ್ಯದಲ್ಲಿದ್ದ ಪ್ರಿಸೈಡಿಂಗ್ ಆಫೀಸರ್ (Presiding Officer) ಅವರಿಗೆ ದಿಢೀರ್ ಹೃದಯಾಘಾತ ಸಂಭವಿಸಿದಾಗ, ಅಲ್ಲಿಯೇ ಭದ್ರತೆಗೆ ನಿಯೋಜನೆಗೊಂಡಿದ್ದ ಮಧ್ಯಪ್ರದೇಶ ವಿಶೇಷ ಸಶಸ್ತ್ರ ಪಡೆಯ (MP SAF) ಯೋಧರು ಸಮಯಪ್ರಜ್ಞೆ ಮೆರೆದು ಅವರ ಪ್ರಾಣ ಉಳಿಸಿದ್ದಾರೆ.
ಮತದಾನ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದಾಗ, ಚುನಾವಣಾ ಅಧಿಕಾರಿಯು ಇದ್ದಕ್ಕಿದ್ದಂತೆ ಎದೆಯ ನೋವಿನಿಂದ ಕುಸಿದುಬಿದ್ದರು. ಇದನ್ನು ಗಮನಿಸಿದ ಕೂಡಲೇ ಸ್ಥಳದಲ್ಲಿದ್ದ ಎಂಪಿ ಎಸ್‌ಎಫ್ (MP SAF) ಸಿಬ್ಬಂದಿ ಕಾರ್ಯಪ್ರವೃತ್ತರಾದರು.
ಯೋಧರು ತಡಮಾಡದೆ ಅಧಿಕಾರಿಗೆ ಸಿಪಿಆರ್ (CPR) ನೀಡಲು ಆರಂಭಿಸಿದರು ಮತ್ತು ಅವರ ದೇಹದ ಉಷ್ಣತೆಯನ್ನು ಕಾಪಾಡಲು ಪ್ರಯತ್ನಿಸಿದರು. ಕೂಡಲೇ ತಮ್ಮದೇ ವಾಹನದಲ್ಲಿ ಸಮೀಪದ ಆಸ್ಪತ್ರೆಗೆ ಕೊಂಡೊಯ್ದರು. ಯೋಧರ ಈ ವೇಗದ ನಿರ್ಧಾರದಿಂದಾಗಿ ಅಧಿಕಾರಿಗೆ ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ದೊರೆತಿದೆ.
”ರೋಗಿಯನ್ನು ಆಸ್ಪತ್ರೆಗೆ ಕರೆತರುವ ಮೊದಲೇ ಯೋಧರು ನೀಡಿದ ಪ್ರಥಮ ಚಿಕಿತ್ಸೆಯು ಪ್ರಾಣ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇನ್ನು ಕೆಲವು ನಿಮಿಷ ತಡವಾಗಿದ್ದರೂ ಅಪಾಯವಾಗುವ ಸಾಧ್ಯತೆಯಿತ್ತು” ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ. ಪ್ರಸ್ತುತ ಅಧಿಕಾರಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.








