ಉತ್ತರಕನ್ನಡ : ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸುಂದರ ಯುವತಿಯರ ಸ್ನೇಹ ಗಿಟ್ಟಿಸಿಕೊಂಡು ಅವರೊಂದಿಗೆ ಪ್ರೀತಿಯ ನಾಟಕವಾಡಿ ಫೋಟೋ ತೆಗೆಸಿಕೊಂಡು ಅವುಗಳನ್ನು ಅಶ್ಲೀಲವೆಂಬಂತೆ ಎಡಿಟ್ ಮಾಡಿ ಬೆದರಿಸಿ ಅತ್ಯಾಚಾರವೆಸಗುತ್ತಿದ್ದ ಕಾಮುಕರ ಗುಂಪಿನ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.
ಹೌದು ಅತ್ಯಾಚಾರ ಪ್ರಕರಣದ ಆರೋಪಿ ಬಂಧಿಸಲು ತೆರಳಿದ್ದಾಗ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮಳಲಿ ಎಂಬ ಗ್ರಾಮದಲ್ಲಿ ನಡೆದಿದೆ. ಸಮವಸ್ತ್ರದಲ್ಲಿದ್ದ ಮೂವರು ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ.
ಅರ್ಜುನ್ ಅಲಿಯಾಸ್ ಅರುಣ ಲಕ್ಷ್ಮಣಗೌಡನನ್ನು ಪೊಲೀಸರು ಬಂಧಿಸಲು ತೆರಳಿದ್ದಾರೆ.ಅರ್ಜುನ ವಿರುದ್ಧ ಬನವಾಸಿ ಠಾಣೆಯಲ್ಲಿ ಅತ್ಯಾಚಾರ ಕೇಸ್ ದಾಖಲಾಗಿತ್ತು. ಶಿರಸಿ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅಲ್ಲದೆ ಉಡುಪಿ ಜಿಲ್ಲೆಯ ಕುಂದಾಪುರ ಠಾಣೆಯಲ್ಲೂ ಕೂಡ ಒಂದು ಕೇಸ್ ದಾಖಲಾಗಿತ್ತು.
ಯುವತಿಯರ ಜೊತೆ ಚಾಟ್ ಮಾಡುತ್ತಾ ಅರ್ಜುನ್ ಅವರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ನಂತರ ಸಲುಗೆಯನ್ನು ಬೆಳೆಸಿ ಬೆತ್ತಲೆ ಫೋಟೋ ತೆಗೆದುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ. ಜಾಲತಾಣದಲ್ಲಿ ಬೆತ್ತಲೆ ಫೋಟೋ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ.ಬ್ಲಾಕ್ ಮೇಲ್ ಮಾಡಿ ಲೈಂಗಿಕ ಕ್ರಿಯೆಗೆ ಅರ್ಜುನ್ ಯುವತಿರಯನ್ನು ಬಳಸಿಕೊಳ್ಳುತ್ತಿದ್ದ. ಈ ಕುರಿತಂತೆ ಕೆಲವರು ಠಾಣೆಗೆ ದೂರು ನೀಡಿದ್ದರು.
ಕೇಸ್ ದಾಖಲಿಸಿಕೊಂಡು ಪೊಲೀಸರು ಆತನನ್ನು ಬಂಧಿಸಲು ತೆರಳಿದ್ದಾಗ ಪೊಲೀಸರ ಮೇಲೆಯೇ ತಮ್ಮ ಸಂಬಂಧಿಕರ ಸಮೇತವಾಗಿ ಕಲ್ಲು ತೂರಾಟ ನಡೆಸಿದ್ದಾನೆ. ಆರೋಪಿಯ ತಾಯಿ ನಾಗವೇಣಿ ಲಕ್ಷ್ಮಣಗೌಡ (50) ಹಾಗೂ ಸಂಬಂಧಿ ಬಾಲಚಂದ್ರ ಗೌಡ (42) ಕೂಡ ಪೊಲೀಸರ ಮೇಲೆ ಕಲ್ಲು ತೂರಿ ಗಾಯಗೊಳಿಸಿದ್ದಾರೆ. ಇವರು ಕಲ್ಲು ಹಾಗೂ ಮನೆಯ ಹೆಂಚುಗಳ ತುಂಡನ್ನು ಬಳಿಸಿ ದಾಳಿ ಮಾಡಿದ್ದಾರೆ. ಈ ವೇಳೆ ಬನವಾಸಿ ಪೊಲೀಸ್ ಠಾಣೆಯ ಕೆ.ಜಗದೀಶ, ಪಿ.ಮಂಜಪ್ಪ ಹಾಗೂ ಡಿ. ಮಂಜುನಾಥ ನಡುವಿನಮನೆ ಎಂಬ ಪೊಲೀಸರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದಾದ ನಂತರ ಪೊಲೀಸರು ಆರೋಪಿ ಅರ್ಜುನ್‌ಗೌಡನನ್ನು ಬಂಧಿಸಿದ್ದಾರೆ. ಆದರೆ, ಈತನಿಗೆ ಸಹಾಯ ಮಾಡುತ್ತಿದ್ದ ಸಂಬಂಧಿ ಬಾಲಚಂದ್ರಗೌಡ ತಪ್ಪಿಸಿಕೊಂಡು ಓಡಿಹೋಗಿ ಇಲಿ ಪಾಷಾಣ ಸೇವಿಸಿದ್ದಾನೆ. ನಂತರ, ಈತನನ್ನು ಪೊಲೀಸರು ಹಿಡಿದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆರೋಪಿಯ ತಾಯಿ ನಾಗವೇಣಿ ಲಕ್ಷ್ಮಣಗೌಡ ಪರಾರಿ ಆಗಿದ್ದಾಳೆ. ಈ ಘಟನೆ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು, ಪಿಎಸ್‌ಐ ಪ್ರತಾಪ ಪಚ್ಚಪ್ಪಗೋಳ ಅವರಿಂದ ತನಿಖೆ ಮುಂದುವರಿದಿದೆ.