ಬೆಂಗಳೂರು : ಹುಬ್ಬಳ್ಳಿಯಲ್ಲಿ ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ ಹೆತ್ತ ಮಗಳನ್ನೇ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ರಾಜ್ಯದಲ್ಲಿ ಮರ್ಯಾದಾ ಹತ್ಯೆ ಹಾಗೂ ಸಂಬಂಧಿತ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತ್ಯೇಕ ಕಾನೂನು ಜಾರಿಗೆ ತರುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ.
ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಮಾನ್ಯ ಎಂಬ ಯುವತಿಯು ಪರಿಶಿಷ್ಟ ಜಾತಿಯ ಹುಡುಗನನ್ನು ಮದುವೆಯಾದ ಕಾರಣ ಆಕೆಯ ತಂದೆ ಮತ್ತು ಸಂಬಂಧಿಕರು ಭೀಕರವಾಗಿ ಕೊಲೆ ಮಾಡಿದ್ದರು. ಪ್ರಕರಣ ಸಂಬಂಧ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಘಟನೆಯು ರಾಜ್ಯಾದ್ಯಂತ ಭಾರಿ ಸದ್ದು ಮಾಡಿತ್ತು.
ಹಾಗಾಗಿ ಈ ಹೊಸ ಕಾನೂನ ಪ್ರಕಾರ, ಮರ್ಯಾದಾ ಹತ್ಯೆ ಆಧಾರಿತ ಅಪರಾಧ ಎಸಗುವವರಿಗೆ 10 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಮತ್ತು 3 ಲಕ್ಷ ರೂ.ಗಳವರೆಗೆ ದಂಡ ವಿಧಿಸುವ ಪ್ರಸ್ತಾಪ ಮಾಡಲಾಗುತ್ತಿದೆ.ಮರ್ಯಾದಾ ಹತ್ಯೆಗಳು ಮತ್ತು ಅಂತರ್ಜಾತಿ ವಿವಾಹಗಳಲ್ಲಿ ದಂಪತಿಗಳ ಮೇಲೆ ಘೋರ ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ವಿವಾಹ ಸ್ವಾತಂತ್ರ್ಯ ಮತ್ತು ಗೌರವ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ನಿಷೇಧ ಮಸೂದೆ-2026 ಎಂಬ ಹೊಸ ಮಸೂದೆ ತರಲು ಸರ್ಕಾರ ಮುಂದಾಗಿದೆ.
ಈ ಮಸೂದೆಯು ಮುಂಬರುವ ಬಜೆಟ್ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ. ಮಸೂದೆಯ ಪ್ರಕಾರ, ಮರ್ಯಾದೆ, ಗೌರವದ ಹೆಸರಿನಲ್ಲಿ ದಂಪತಿಗಳು ಅಥವಾ ಅವರಲ್ಲಿ ಒಬ್ಬರಿಗೆ ಗಂಭೀರ ಹಾನಿಯನ್ನುಂಟು ಮಾಡುವವರಿಗೆ ಕನಿಷ್ಠ 10 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇದು ಜೀವಾವಧಿ ಶಿಕ್ಷೆ ಮತ್ತು 3 ಲಕ್ಷ ರೂ.ಗಳವರೆಗೆ ದಂಡದವರೆಗೆ ವಿಸ್ತರಿಸಲ್ಪಡಬಹುದು.
ಪ್ರಸ್ತಾವಿತ ಮಸೂದೆಯು ಸಂತ್ರಸ್ತರು ತಮ್ಮನ್ನು, ತಮ್ಮ ಅವಲಂಬಿತರನ್ನು ಮತ್ತು ಸಾಕ್ಷಿಗಳನ್ನು ಯಾವುದೇ ರೀತಿಯ ಬೆದರಿಕೆ, ಬಲವಂತ, ಪ್ರಚೋದನೆ, ಹಿಂಸೆ ಅಥವಾ ಹಿಂಸಾಚಾರದ ಬೆದರಿಕೆಯಿಂದ ರಕ್ಷಿಸಿಕೊಳ್ಳಲು ಅವಕಾಶ ನೀಡಲಿದೆ. ಅಲ್ಲದೆ, ಸಂತ್ರಸ್ತರಿಂದ ದೂರು ಸ್ವೀಕರಿಸಿದ 6 ಗಂಟೆಗಳ ಒಳಗೆ ರಕ್ಷಣೆ ನೀಡುವುದು ಪೊಲೀಸರು ಕರ್ತವ್ಯವಾಗಿದೆ. ಅಂತಹ ದಂಪತಿಗೆ ಆಶ್ರಯ ನೀಡಲು ರಾಜ್ಯ ಸರ್ಕಾರವೂ ಬದ್ಧವಾಗಿರಲಿದೆ.








