ಸೂರತ್: ಸೂರತ್‌ನ ಹಜಿರಾ ಕೈಗಾರಿಕಾ ಪ್ರದೇಶದಲ್ಲಿ ಉಕ್ಕಿನ ಕಾರ್ಖಾನೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಬೆಂಕಿಯಲ್ಲಿ ಕನಿಷ್ಠ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾದಲ್ಲಿ (AM/NS India) ಈ ಘಟನೆ ನಡೆದಿದೆ ಎಂದು ಸೂರತ್ ಪೊಲೀಸ್ ಆಯುಕ್ತ ಅನುಪಮ್ ಸಿಂಗ್ ಗೆಹ್ಲೋಟ್ ಹೇಳಿದ್ದಾರೆ. ಕಲ್ಲಿದ್ದಲು ಸುಟ್ಟ ನಂತರ ಏಕಾಏಕಿ ಸ್ಥಾವರದ ಒಂದು ಭಾಗದಲ್ಲಿ ಬೆಂಕಿ ವ್ಯಾಪಿಸಿದ್ದು, ಈ ವೇಳೆ ಪ್ಲಾಂಟ್‌ನಲ್ಲಿದ್ದ ಲಿಫ್ಟ್‌ನಲ್ಲಿದ್ದ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಕುರಿತು ಪೊಲೀಸರು ಮತ್ತು ಕಾರ್ಖಾನೆ ಇನ್ಸ್‌ಪೆಕ್ಟರ್‌ನಿಂದ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದರು.
ನಾಲ್ವರು ಮೃತಪಟ್ಟಿದ್ದು, ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಿವಿಲ್ ಆಸ್ಪತ್ರೆಗೆ ತರಲಾಗಿದೆ. ಕೋರೆಕ್ಸ್ ಸ್ಥಾವರದಲ್ಲಿನ ಉಪಕರಣಗಳ ವೈಫಲ್ಯದಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಕಂಪನಿಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಎಎಮ್‌ಎನ್‌ಎಸ್ ಹಜಿರಾ ಕಾರ್ಯಾಚರಣೆಯಲ್ಲಿನ ಉಪಕರಣಗಳ ವೈಫಲ್ಯದಿಂದಾಗಿ ಕೋರೆಕ್ಸ್ ಸ್ಥಾವರದಲ್ಲಿ ಸಂಭವಿಸಿದ ಅಪಘಾತದ ಬಗ್ಗೆ ನಿಮಗೆ ತಿಳಿಸಲು ನಾವು ವಿಷಾದಿಸುತ್ತೇವೆ. ಸ್ಥಗಿತಗೊಳಿಸಿದ ನಂತರ ಘಟಕವನ್ನು ಪುನರಾರಂಭಿಸುವಾಗ ಇಂದು ಸಂಜೆ 6 ಗಂಟೆಗೆ ಅಪಘಾತ ಸಂಭವಿಸಿದೆ ಎಂದು ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ ಹತ್ತಿರದ ಲಿಫ್ಟ್‌ನಲ್ಲಿ ನಿರ್ವಹಣಾ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಉದ್ಯೋಗಿಗಳು ಅಪಘಾತದಲ್ಲಿ ಸಿಲುಕಿಕೊಂಡರು ಮತ್ತು ಬದುಕುಳಿಯಲು ಸಾಧ್ಯವಾಗಲಿಲ್ಲ. ಒಬ್ಬ ನೌಕರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣ ಪ್ಲಾಂಟ್ ಆವರಣದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅವರ ಸ್ಥಿತಿ ಸುಧಾರಿಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.