ನವದೆಹಲಿ : ನೇಪಾಳದಲ್ಲಿ ಭಾರಿ ಅನಾಹುತವೊಂದು ತಪ್ಪಿದ್ದು, ನೇಪಾಳದ ರಾಜಧಾನಿ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿಗಳನ್ನ ಬೇರೆ ಕಡೆಗೆ ಸುರಕ್ಷಿತವಾಗಿ ಶಿಫ್ಟ್ ಮಾಡಲಾಗಿದೆ. ಅದೃಷ್ಟವಶತ್ ಪ್ರಯಾಣಿಕರು ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದು ಭಾರಿ ಅನಾಹುತ ಒಂದು ತಪ್ಪಿದೆ.
ವಿಮಾನವು ನಿಗದಿತ ಸಮಯಕ್ಕೆ ಕಠ್ಮಂಡು ವಿಮಾನ ನಿಲ್ದಾಣಕ್ಕೆ ಆಗಮಿಸಿ ರನ್‌ವೇ ಸ್ಪರ್ಶಿಸುತ್ತಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಕೂಡಲೇ ಎಚ್ಚೆತ್ತುಕೊಂಡ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದಾರೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಮತ್ತು ಸಿಬ್ಬಂದಿಯನ್ನು ತುರ್ತು ನಿರ್ಗಮನದ ಮೂಲಕ ತಕ್ಷಣವೇ ಬೇರೆಡೆಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.
ಪ್ರಾಥಮಿಕ ವರದಿಗಳ ಪ್ರಕಾರ, ವಿಮಾನದ ಎಂಜಿನ್ ಅಥವಾ ಚಕ್ರಗಳ ಭಾಗದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಈ ಅಗ್ನಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಪೈಲಟ್‌ಗಳು ಸಮಯಪ್ರಜ್ಞೆ ಮೆರೆದು ವಿಮಾನವನ್ನು ನಿಯಂತ್ರಿಸಿದ ಕಾರಣ ದೊಡ್ಡ ಮಟ್ಟದ ಸ್ಫೋಟ ಅಥವಾ ಅನಾಹುತ ತಪ್ಪಿದಂತಾಗಿದೆ. ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾದ ಬಗ್ಗೆ ವರದಿಯಾಗಿಲ್ಲ.
ಪ್ರಸ್ತುತ ವಿಮಾನ ನಿಲ್ದಾಣದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ತಾಂತ್ರಿಕ ತಂಡವು ವಿಮಾನವನ್ನು ಪರಿಶೀಲಿಸುತ್ತಿದ್ದು, ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಬೆಂಕಿಯ ಜ್ವಾಲೆ ಕಂಡ ಪ್ರಯಾಣಿಕರು ಒಮ್ಮೆಲೇ ದಿಗಿಲುಗೊಂಡರೂ, ಅಧಿಕಾರಿಗಳ ತ್ವರಿತ ಸ್ಪಂದನೆಯಿಂದಾಗಿ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.






