ನವದೆಹಲಿ : ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಹೊಸ ಕೊಂಡಿ ಪತ್ತೆಯಾಗಿದೆ. ಸಿಬಿಐ ಕಾರ್ಯಾಚರಣೆ ನಡೆಸಿ ಪ್ರಮುಖ ಶಂಕಿತನನ್ನು ಬಂಧಿಸಿದೆ. ಈತನ ಹಿಂದೆ ದೊಡ್ಡ ಶಿಕ್ಷಣ ಮಾಫಿಯಾ ಇರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ತೀವ್ರಗೊಂಡಿದೆ. ಮೊಬೈಲ್ ದತ್ತಾಂಶಗಳ ಮೂಲಕ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಈ ಹಗರಣದಲ್ಲಿ ಇನ್ನೂ ದೊಡ್ಡ ವ್ಯಕ್ತಿಗಳು ಸಿಲುಕುವ ಸಾಧ್ಯತೆ ಇದೆ.
ರಾಜಸ್ಥಾನ ಮತ್ತು ಬಿಹಾರದಲ್ಲಿ ಈ ಹಿಂದೆ ನಡೆದಿದ್ದ ಬಂಧನಗಳ ಬೆನ್ನಲ್ಲೇ, ತನಿಖಾ ಸಂಸ್ಥೆಗಳಿಗೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಈ ದಂಧೆಯ ಕೊಂಡಿಗಳು ಇರುವುದು ಸಾಬೀತಾಗಿದೆ. ವಶಕ್ಕೆ ಪಡೆದ ಶಂಕಿತ ವ್ಯಕ್ತಿಯು ಪರೀಕ್ಷೆಗೂ ಮುನ್ನವೇ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ತಲುಪಿಸುವಲ್ಲಿ ಅಥವಾ ಹಣಕಾಸಿನ ವ್ಯವಹಾರ ಕುದುರಿಸುವಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ನಾಸಿಕ್‌ನಲ್ಲಿ ವಶಕ್ಕೆ ಪಡೆದ ವ್ಯಕ್ತಿಯನ್ನು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ಈತನ ಹಿಂದೆ ದೊಡ್ಡ ಶಿಕ್ಷಣ ಮಾಫಿಯಾ ಇರುವ ಶಂಕೆ ವ್ಯಕ್ತವಾಗಿದೆ. ಮೇ 3ರಂದು ನಡೆದಿದ್ದ ಪರೀಕ್ಷೆಯ ಪತ್ರಿಕೆಯು ಕೇವಲ ಒಂದು ರಾಜ್ಯಕ್ಕೆ ಸೀಮಿತವಾಗದೆ, ನಾಸಿಕ್ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಹಂಚಿಕೆಯಾಗಿರುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಶಂಕಿತನ ಮೊಬೈಲ್ ಮತ್ತು ಲಾಪ್ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಾಟ್ಸಾಪ್ ಸಂದೇಶಗಳ ಮೂಲಕ ಪತ್ರಿಕೆ ಸೋರಿಕೆಯಾಗಿರುವ ದತ್ತಾಂಶಗಳನ್ನು ಸಿಬಿಐ ಸಂಗ್ರಹಿಸುತ್ತಿದೆ








