ರಾಮನಗರ: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪರಮಾಪ್ತ ಶಾಸಕ ಇಕ್ಬಾಲ್ ಹುಸೇನ್, “ಮೇ 15ಕ್ಕೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವುದು ಖಚಿತ” ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಇಕ್ಬಾಲ್ ಹುಸೇನ್, ಸಿಎಂ ಬದಲಾವಣೆ ಕುರಿತು ಸ್ಪಷ್ಟನೆ ನೀಡಿದರು. “ಈ ಹಿಂದೆ ನಾನು ಎರಡು-ಮೂರು ಬಾರಿ ದಿನಾಂಕಗಳನ್ನು ಹೇಳಿದ್ದೆ. ಆದರೆ ಈ ಬಾರಿ ನಾನು ಅಂತಿಮವಾಗಿ ಹೇಳುತ್ತಿದ್ದೇನೆ, ಮೇ 15ಕ್ಕೆ ಡಿ.ಕೆ. ಶಿವಕುಮಾರ್ ಸಿಎಂ ಗದ್ದುಗೆ ಏರಲಿದ್ದಾರೆ. ಇದೇ ನನ್ನ ಫೈನಲ್ ಡೆಡ್‌ಲೈನ್,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕು ಎಂಬುದು ಕೇವಲ ನನ್ನ ಆಸೆಯಲ್ಲ, ರಾಜ್ಯದ ನೂರಾರು ಶಾಸಕರು ಮತ್ತು ಜನರ ಹಂಬಲವಾಗಿದೆ. ಪಕ್ಷಕ್ಕಾಗಿ ಶ್ರಮ: ಡಿ.ಕೆ.ಎಸ್ ಅವರು ಪಕ್ಷಕ್ಕಾಗಿ ರಕ್ತ ಸುರಿಸಿದ್ದಾರೆ, ಕಠಿಣ ಶ್ರಮ ಪಟ್ಟಿದ್ದಾರೆ. ಅವರಿಗೆ ಈ ಜನ್ಮದಿನದಂದು ಮುಖ್ಯಮಂತ್ರಿ ಸ್ಥಾನದ ‘ಗಿಫ್ಟ್’ ಸಿಗಲಿ ಎಂಬುದು ನಮ್ಮ ಹಾರೈಕೆಯಾಗಿದೆ.ಅವರ ನೇತೃತ್ವದಲ್ಲಿ ರಾಜ್ಯದ ಅಭಿವೃದ್ಧಿ ಕೆಲಸಗಳು ಮತ್ತಷ್ಟು ವೇಗ ಪಡೆದುಕೊಳ್ಳಲಿವೆ ಎಂಬ ನಂಬಿಕೆ ನಮಗಿದೆ ಎಂದು ಅವರು ತಿಳಿಸಿದರು.








