ಧಾರವಾಡ : ಕಳೆದ ಕೆಲವು ವರ್ಷಗಳ ಹಿಂದೆ ಪಿಎಸ್ಐ ಹುದ್ದೆಗೆ ನಡೆದ ನೇಮಕಾತಿಯಲ್ಲಿ ನಡೆದ ಅಕ್ರಮ ಇಡಿ ದೇಶದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಇದೀಗ ಬಿಎಂಟಿಸಿ ನಿರ್ವಾಹಕರ ಹುದ್ದೆಗೆ ಇಂದು ನಡೆದ ನೇಮಕಾತಿ ಪರೀಕ್ಷೆಯ ವೇಳೆ ಕೂಡ ನಕಲು ಮಾಡಿರುವ ಆರೋಪ ಕೇಳಿ ಬಂದಿದೆ.
ಹೌದು ಧಾರವಾಡ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ವೇಳೆ ನಕಲು ಮಾಡಿರುವ ಆರೋಪ ಕೇಳಿಬಂದಿದ್ದು, ಬಾಸೆಲ್ ಮಿಷನ್ ಪಿಯು ಕಾಲೇಜಿನ ಕಟ್ಟಡದ ಬಳಿ ಕಾಪಿ ಚೀಟಿ ಪತ್ತೆಯಾಗಿದೆ. ಸಾಮಾನ್ಯ ಜ್ಞಾನ ಪರೀಕ್ಷೆ ವೇಳೆ ಕಾಪಿ ಚೀಟಿ ನಡೆದ ಆರೋಪ ಕೇಳಿ ಬಂದಿದೆ. ಚೀಟಿಯಲ್ಲಿ ಪ್ರಶ್ನೋತ್ತರ ಬರೆದು ಕಟ್ಟಡದಿಂದ ಕೆಳಗಡೆ ಎಸೆಯಲಾಗಿದೆ ಎಂದು ಆರೋಪಿಸಲಾಗುತ್ತಿದೆ.
ಪರೀಕ್ಷೆ ನಡೆದ ಕಟ್ಟಡದ ಬಳಿ ಅಭ್ಯರ್ಥಿ ಮಹಾಂತೇಶ್ ಗೆ ಚೀಟಿ ಸಿಕ್ಕಿದೆ. ಕೂಡಲೇ ಅಭ್ಯರ್ಥಿ ಮಹಾಂತೇಶ್ ಪರೀಕ್ಷಾ ಕೇಂದ್ರದ ಸಿಬ್ಬಂದಿಗೆ ಪ್ರಶ್ನೋತ್ತರ ಚೀಟಿ ಒಪ್ಪಿಸಿದ್ದಾನೆ. ಚೀಟಿಯಲ್ಲಿ ಐದು ಪ್ರಶ್ನೆಗಳಿಗೆ ಉತ್ತರ ಬರೆದಿರುವ ಆರೋಪ ಕೇಳಿ ಬಂದಿದೆ. ತಹಶೀಲ್ದಾರ್ ದೊಡ್ಡಪ್ಪ, ಶಹರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇಂದು 2500 ಬಿಎಂಟಿಸಿ ನಿರ್ವಾಹಕರ ಹುದ್ದೆಗಳಿಗೆ ಪರೀಕ್ಷೆ ನಡೆಯುತ್ತಿದೆ.