ಮುಸ್ಕಾಟಿನ್ (ಅಮೆರಿಕ): ಆಗ್ನೇಯ ಐಯೋವಾದಲ್ಲಿ ಸೋಮವಾರ ನಡೆದ ಭೀಕರ ಗುಂಡಿನ ದಾಳಿಗೆ ಆಕ್ರಮಣಕಾರ ಸೇರಿದಂತೆ ಒಟ್ಟು ಏಳು ಜನರು ಬಲಿಯಾಗಿದ್ದಾರೆ. ಒಂದೇ ಕುಟುಂಬದ ಸದಸ್ಯರ ನಡುವೆ ನಡೆದ ಕೌಟುಂಬಿಕ ಕಲಹವೇ ಈ ರಕ್ತಪಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಸುಮಾರು 12:12 ರ ಸುಮಾರಿಗೆ ಮುಸ್ಕಾಟಿನ್ ನಗರದ ವಸತಿ ಪ್ರದೇಶವೊಂದರಲ್ಲಿ ಗುಂಡಿನ ದಾಳಿ ನಡೆದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಮತ್ತು ತುರ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.
ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದಾಗ, ಮನೆಯ ಒಳಗಡೆ ನಾಲ್ವರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ತೀವ್ರವಾದ ಬುಲೆಟ್ ಗಾಯಗಳಿಂದಾಗಿ ನಾಲ್ಕೂ ಜನ ಸ್ಥಳದಲ್ಲೇ ಸಾವನ್ನಪ್ಪಿದ್ದರು ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಪ್ರಾಥಮಿಕ ತನಿಖೆಯ ನಂತರ, ಪೊಲೀಸರು ಮುಸ್ಕಾಟಿನ್ ನಿವಾಸಿ 52 ವರ್ಷದ ರಯಾನ್ ವಿಲ್ಲಿಸ್ ಮೆಕ್‌ಫಾರ್ಲ್ಯಾಂಡ್ ಎಂಬಾತನನ್ನು ಶೂಟರ್ ಎಂದು ಗುರುತಿಸಿದ್ದಾರೆ. ಆದರೆ, ಪೊಲೀಸರು ಬರುವಷ್ಟರಲ್ಲೇ ಆತ ಅಲ್ಲಿಂದ ಪರಾರಿಯಾಗಿದ್ದ.ಬಳಿಕ ಪೊಲೀಸರು ಕಾರ್ಯಾಚರಣೆ ನಡೆಸಿ ಮೆಕ್‌ಫಾರ್ಲ್ಯಾಂಡ್‌ನನ್ನು ಪತ್ತೆಹಚ್ಚಿದಾಗ, ಆತ ತನಗೆ ತಾನೇ ಗುಂಡಿಟ್ಟುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ವೈದ್ಯಕೀಯ ಸಿಬ್ಬಂದಿ ಆತನನ್ನು ರಕ್ಷಿಸಲು ಪ್ರಯತ್ನಿಸಿದರಾದರೂ, ಆತ ಕೂಡ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ತನಿಖೆ ಮುಂದುವರಿದಂತೆ, ಈ ಘಟನೆಯಲ್ಲಿ ಇನ್ನು ಕೆಲವು ಬಲಿಪಶುಗಳು ಇರುವ ಶಂಕೆ ಪೊಲೀಸರಿಗೆ ವ್ಯಕ್ತವಾಯಿತು. ಅದರಂತೆ ಹತ್ತಿರದ ಮತ್ತೊಂದು ಮನೆ ಮತ್ತು ವಾಣಿಜ್ಯ ಸಂಸ್ಥೆಯೊಂದರಲ್ಲಿ ತಪಾಸಣೆ ನಡೆಸಿದಾಗ, ಅಲ್ಲಿಯೂ ತಲಾ ಒಬ್ಬೊಬ್ಬರಂತೆ ಇಬ್ಬರು ವಯಸ್ಕ ಪುರುಷರು ಗುಂಡೇಟಿನಿಂದ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.ಇದರೊಂದಿಗೆ ಈ ಭೀಕರ ಘಟನೆಯಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ ಏಳಕ್ಕೆ (ಶೂಟರ್ ಸೇರಿ) ಏರಿಕೆಯಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಕೌಟುಂಬಿಕ ಕಲಹವೇ ಈ ಹತ್ಯಾಕಾಂಡಕ್ಕೆ ಪ್ರಮುಖ ಕಾರಣವಾಗಿದೆ. ಮೃತಪಟ್ಟವರೆಲ್ಲರೂ ಶೂಟರ್ ಮೆಕ್‌ಫಾರ್ಲ್ಯಾಂಡ್‌ನ ಕುಟುಂಬದವರೇ ಆಗಿದ್ದಾರೆ ಎಂದು ನಂಬಲಾಗಿದೆ. ಮೃತರ ಕುಟುಂಬಸ್ಥರಿಗೆ ಮಾಹಿತಿ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿರುವುದರಿಂದ ಸದ್ಯಕ್ಕೆ ಅವರ ಹೆಸರುಗಳನ್ನು ಬಹಿರಂಗಪಡಿಸುತ್ತಿಲ್ಲ.








