ಬೆಂಗಳೂರು : ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಯಾವಾಗಲೂ ವಿವಾದದ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿ ಇರುತ್ತಾರೆ. ಸದಾ ಬಿಜೆಪಿ, ಕೇಂದ್ರ ಸರ್ಕಾರ, ಪ್ರಧಾನಿ ವಿರುದ್ಧ ಟೀಕೆ ಮಾಡುತ್ತಿರುತ್ತಾರೆ. ಅಲ್ಲದೇ ಹಿಂದೂಗಳ ವಿರುದ್ಧವೂ ಸಾಕಷ್ಟು ವಿವಾದದ ಹೇಳಿಕೆ ನೀಡಿರುವ ಪ್ರಕರಣಗಳು ನಡೆದಿವೆ.
ಇದೀಗ ಕೇರಳದಲ್ಲಿ ನಡೆದ ಸಾಹಿತ್ಯ ಉತ್ಸವದಲ್ಲಿ ನಟ ರಾಮಾಯಣದ ಬಗ್ಗೆ ಅತ್ಯಂತ ಕೆಟ್ಟದ್ದಾಗಿ ಮಾತನಾಡಿದ್ದಾರೆ. ಕೇಂದ್ರ ಸರ್ಕಾರ, ಹಿಂದಿ ಭಾಷೆ ಎಲ್ಲವನ್ನೂ ಟೀಕಿಸುವ ಭರದಲ್ಲಿ, ಶ್ರೀರಾಮನನ್ನ ಉದಾಹರಣೆ ಮಾಡಿಕೊಂಡು ವಿವಾದದ ಹೇಳಿಕೆ ನೀಡಿದ್ದಾರೆ. ಶ್ರೀರಾಮ ಉತ್ತರ ಭಾರತದವನು ಹಾಗೆಯೇ ರಾವಣ ದಕ್ಷಿಣ ಭಾರತದ ಆದಿವಾಸಿ ಅಷ್ಟೇ. ರಾಮನು ದಕ್ಷಿಣ ಭಾರತದ ಜಮೀನಿಗೆ ನುಗ್ಗಿ ಹಣ್ಣನ್ನು ಕಿತ್ತು ತಿಂದಿದ್ದಾನೆ ಎನ್ನುವ ಮೂಲಕ ತಾವೇ ಸೃಷ್ಟಿಸಿರುವ ಕಥೆಯೊಂದನ್ನು ಹೇಳಿದ್ದಾರೆ.
ಪ್ರಕಾಶ್ ರಾಜ್ ಅವರು ರಾಮಾಯಣವನ್ನು ಇಂದಿನ ರಾಜಕೀಯ ಪರಿಸ್ಥಿತಿಗೆ ಹೋಲಿಸಿ ಮಾತನಾಡುತ್ತಾ, “ಶ್ರೀರಾಮ ಉತ್ತರ ಭಾರತದವನು, ಆತ ದಕ್ಷಿಣಕ್ಕೆ ಬಂದು ಇಲ್ಲಿನ ಹಣ್ಣುಗಳನ್ನು ಕದ್ದು ತಿಂದಿದ್ದಕ್ಕೆ ರಾವಣನ ಜೊತೆ ಜಗಳವಾಯಿತು” ಎಂಬ ಅರ್ಥ ಬರುವಂತೆ ವ್ಯಂಗ್ಯವಾಗಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ರಾವಣನು ಹಣ್ಣು ತಿಂದಿದ್ದಕ್ಕೆ ಪರಿಹಾರ ಕೇಳಿದಾಗ, ತಾವು ವನವಾಸದಲ್ಲಿದ್ದೇವೆ ಎಂದು ರಾಮ-ಲಕ್ಷ್ಮಣರು ಹೇಳಿದ ಪ್ರಸಂಗಕ್ಕೆ “ಜಿಎಸ್‌ಟಿ” (GST) ಯಂತಹ ಆಧುನಿಕ ವಿಷಯಗಳನ್ನು ತಳಕು ಹಾಕಿ ಹಾಸ್ಯ ಮಾಡಿದ್ದರು ಎನ್ನಲಾಗಿದೆ.
ಬಳಿಕ, ರಾವಣ ಅವರಿಗೆ ಹಸಿವಾಗಿದೆ ಬಿಡು ತಿನ್ನಲಿ, ಆ ಮೇಲೆ ಮಾತಾಡೋಣ ಎನ್ನುತ್ತಾನೆ. ಅದಾದ ಬಳಿಕ ರಾವಣ, ಶೂರ್ಪನಕಿ ರಾಮ, ಲಕ್ಷ್ಮಣರ ಎದುರಿಗೆ ಹೋದಾಗ ರಾಮ ಯಾರೋ ಬುಡಕಟ್ಟ ಜನಾಂಗದವರು ಬಂದರು ಎನ್ನುತ್ತಾನೆ. ಹಣ್ಣುಗಳನ್ನು ತಿಂದಿದ್ದಕ್ಕೆ ಹಣ ನೀಡಬೇಕು ಎಂದು ರಾವಣ ಹೇಳುತ್ತಾನೆ. ಲೆಕ್ಕ ಮಾಡಿ 2000 ಸಾವಿರ ಡಾಲರ್ ಜೊತೆ ಜಿಎಸ್‌ಟಿ ಕಟ್ಟಬೇಕು ಎಂದು ಹೇಳುತ್ತಾನೆ ಎನ್ನುವುದು ಈ ಕಥೆಯ ಮುಂದುವರೆದ ಭಾಗ.
ಆಗ ರಾಮ, ಲಕ್ಷ್ಮಣ ನಮ್ಮ ಬಳಿ ಹಣವಿಲ್ಲ ಹೇಳುತ್ತಾರೆ . ಆ ಸಮಯದಲ್ಲಿ ರಾವಣ ನಿಮಗೆ ಕೆಲವೊಂದು ರಿಯಾಯ್ತಿ ನೀಡುತ್ತೇವೆ ಎಂದು ಹೇಳಿದರೂ ನಮ್ಮ ಬಳಿ ಹಣ ಇಲ್ಲ ಎನ್ನುತ್ತಾನೆ ರಾಮ. ಆಗ ರಾವಣ ಹಣ್ಣುಗಳನ್ನು ತಿಂದ ಬಳಿಕ ಉಳಿದ ಬೀಜವನ್ನು ನೆಟ್ಟು ಅದನ್ನು ಗಿಡವನ್ನಾಗಿ ಮಾಡಿ ಹೋಗಿ ಎನ್ನುತ್ತಾನೆ. ಹಾಗೆಯೇ ಹೆಸರು ಕೇಳಿದಾಗ, ನಾನು ರಾಮ, ನಾವು ಉತ್ತರ ಭಾರತದವರು ಎಂದು ಹೇಳುತ್ತಾನೆ ಎಂದಿದ್ದಾರೆ
ಕೊನೆಗೆ ಇದನ್ನು ಹಿಂದಿಗೆ ಲಿಂಕ್ ಮಾಡಿ, ಹಿಂದಿ ಹೇರಿಕೆ ಸ್ಥಿತಿಯೂ ಇದೇ ಆಗಿದೆ. ದುಡ್ಡೇ ಇಲ್ಲದ ಮೇಲೆ ಡಿಸ್ಕೌಂಟ್ ಕೊಟ್ರೆ ಏನು ಪ್ರಯೋಜನ ಎನ್ನುವ ರೀತಿ ಹಿಂದಿ ಹೇರಿಕೆ ಮಾಡಬೇಡಿ. ಇಲ್ಲಿ ಬಂದು ನೀವು ಮಲಯಾಳಂ ಕಲಿಯಿರಿ. ನಾವು ಬೀಫ್ ಫೆಸ್ಟ್ ಮಾಡುತ್ತೇವೆ’ ಎಂದಿದ್ದಾರೆ ಪ್ರಕಾಶ್ ರಾಜ್. ರಾಮಾಯಣ ಹಾಗೂ ಬೀಫ್ ಫೆಸ್ಟ್ ಬಗ್ಗೆ ಮಾತನಾಡಿದ್ದಕ್ಕೆ ಕ್ರಿಮಿನಲ್ ಕೇಸ್ ದಾಖಲಾಗಿದೆ.
ಈ ಹೇಳಿಕೆಯು ಹಿಂದೂ ಧರ್ಮೀಯರ ಹಾಗೂ ಶ್ರೀರಾಮನ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಅವರ ವಿರುದ್ಧ ದೂರುಗಳು ದಾಖಲಾಗಿವೆ. ವರದಿಗಳ ಪ್ರಕಾರ, ಧಾರ್ಮಿಕ ಭಾವನೆಗಳಿಗೆ ಚ್ಯುತಿ ತಂದ ಆರೋಪದ ಮೇಲೆ (IPC ಸೆಕ್ಷನ್ ಅಡಿಯಲ್ಲಿ) ಪ್ರಕಾಶ್ ರಾಜ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.








