ಕಲಬುರ್ಗಿ : ಕಳೆದ ಡಿಸೆಂಬರ್ 26 ರಂದು ಬೀದರ್ ನಲ್ಲಿ ರೈಲಿಗೆ ತಲೆ ಕೊಟ್ಟು ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪ್ರಕರಣದ ಪ್ರಮುಖ ಆರೋಪಿ ಆಗಿರುವ ರಾಜು ಕಪನೂರ್ ನವರಿಗೆ ಕಲ್ಬುರ್ಗಿ ಜಿಲ್ಲಾ ಮತ್ತು ಸೇಷನ್ಸ್ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಹೌದು ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತರಾದ ರಾಜು ಕಪನೂರ್ ಗೆ ತನ್ನ ಹುಟ್ಟು ಹಬ್ಬದ ದಿನದಂದೇ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಇಂದು ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಅರ್ಜಿದಾರರ ಹತ್ತಿರ ಶಸ್ತ್ರಾಸ್ತ್ರಗಳಿದ್ದಲ್ಲಿ ಕಲಬುರ್ಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಒಪ್ಪಿಸಬೇಕು. ಅವರು ಸಾಕ್ಷಿ ನಾಶಪಡಿಸಲು ಪ್ರಯತ್ನಿಸದೆ, ತನಿಖೆಗೆ ಸಹಕರಿಸಬೇಕು. ತನಿಖಾಧಿಕಾರಿಯು ಅವರಿಗೆ ನಿರ್ದಿಷ್ಟವಾಗಿ ಸಮನ್ಸ್ ನೀಡಿದಾಗ ತನಿಖಾ ಉದ್ದೇಶಕ್ಕಾಗಿ ಹೊರತುಪಡಿಸಿ ಯಾವುದೇ ಕಾರಣಕ್ಕೂ ಬೀದರ್ ಜಿಲ್ಲೆಗೆ ಪ್ರವೇಶ ಮಾಡಬಾರದು. ತನಿಖೆ ಪೂರ್ಣಗೊಂಡ ನಂತರ ಅವರು ನ್ಯಾಯಾಲಯದ ಮುಂದೆ ಹಾಜರಾಗಬೇಕಾದಾಗ ಮಾತ್ರ ಬೀದರ್ ಜಿಲ್ಲೆಗೆ ಪ್ರವೇಶಿಸಬೇಕು ಎಂದು ಷರತ್ತು ವಿಧಿಸಲಾಗಿದೆ.