ಬೆಂಗಳೂರು : ಕಾನ್ಫಿಡೆಂಟ್ ಗ್ರೂಪ್‌ನ ಮುಖ್ಯಸ್ಥ ಹಾಗೂ ಖ್ಯಾತ ಉದ್ಯಮಿ ಸಿ.ಜೆ.ರಾಯ್ ಅವರ ಪಾರ್ಥಿವ ಶರೀರವನ್ನು ಬೌರಿಂಗ್ ಆಸ್ಪತ್ರೆಯಿಂದ ಪತ್ನಿ ಹಾಗೂ ಮಕ್ಕಳಿಗೆ ಹಸ್ತಾಂತರ ಮಾಡಲಾಗಿದ್ದು, ರಾಯ್ ಅವರ ಇಚ್ಛೆಯಂತೆ ಬನ್ನೇರುಘಟ್ಟದ ಕಾಸಾಗ್ರಾಂಡ್‌ನಲ್ಲಿ ಇಂದು ಕ್ರಿಶ್ಚಿಯನ್ ಸಾಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತು.
ಆಸ್ಪತ್ರೆ ಬಳಿ ರಾಯ್ ಪತ್ನಿ ಮತ್ತು ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು. ಆಸ್ಪತ್ರೆಯಿಂದ ಹೊರಟ ಆಂಬ್ಯುಲೆನ್ಸ್ನ್ನು ರಾಯ್ ಅವರ ಕಾನ್ಫಿಡೆಂಟ್ ಕಚೇರಿ ಮುಂದೆ ಕೆಲಕಾಲ ನಿಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಶಾಸಕ ಎನ್.ಎ.ಹ್ಯಾರಿಸ್ ಅವರು ರಾಯ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಕಾನ್ಫಿಡೆಂಟ್ ಗ್ರೂಪ್‌ನ ಮುಖ್ಯಸ್ಥ ಸಿ.ಜೆ.ರಾಯ್ ಅವರು ಜನವರಿ 30ರಂದು ಪಿಸ್ತೂಲ್‌ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಶೋಕನಗರ ಠಾಣಾ ವ್ಯಾಪ್ತಿಯ ಲ್ಯಾಂಗ್ ಫೋರ್ಡ್ ಟೌನ್‌ನಲ್ಲಿರುವ ತಮ್ಮದೇ ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಸಿ.ಜೆ.ರಾಯ್, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದರು. ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿಯೇ ಘಟನೆ ನಡೆದಿತ್ತು.
‘SIT’ ಇಂದ ತನಿಖೆ
ಈಗಾಗಲೇ, ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದ ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರ ಅನುಮತಿ ನೀಡಿದ ಹಿನ್ನಲೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಎಸ್ಐಟಿ ತಂಡ ರಚಿಸಿದ್ದಾರೆ.
ಬೆಂಗಳೂರು ನಗರದ ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಿ.ವಂಶಿಕೃಷ್ಣ ನೇತೃತ್ವದಲ್ಲಿ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಪ್ರಕರಣದ ತನಿಖಾಧಿಕಾರಿಯಾಗಿ ನಿಯೋಜಿಸಲಾಗಿದೆ. ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಹಕೆ, ಹಲಸೂರು ಗೇಟ್ ಉಪವಿಭಾಗದ ಎಸಿಪಿ ಸುಧೀರ್, ಸಿಸಿಆರ್ ಬಿ ರಾಮಚಂದ್ರ ಹಾಗೂ ಅಶೋಕನಗರ ಇನ್ಸ್ಪೆಕ್ಟರ್ ಕೆ.ಬಿ.ರವಿ ಅವರು ತಂಡದಲ್ಲಿ ಇದ್ದಾರೆ.








