ಬೆಂಗಳೂರು : ರಾಜ್ಯದಲ್ಲಿ ಮಾದಕ ದ್ರವ್ಯ ಸೇವನೆ ಹಾಗೂ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯೊಂದು ಇಟ್ಟಿದ್ದು, ಮಾದಕವಸ್ತುಗಳ ಹಾವಳಿಯನ್ನು ನಿಗ್ರಹಿಸಲು ರಚಿಸಲಾದ ಮಾದಕದ್ರವ್ಯ ವಿರೋಧಿ ಕಾರ್ಯಪಡೆ (ANTF)ಗೆ ಇಂದು ಚಾಲನೆ ನೀಡಲಾಯಿತು.
ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಒಂದು ಕಾರ್ಯಪಡೆಗೆ ಚಾಲನೆ ನೀಡಿದ್ದಾರೆ.66 ಸಿಬ್ಬಂದಿಗಳ ಅನುಮೋದಿತ ಬಲದೊಂದಿಗೆ ಮಾದಕವಸ್ತು ನಿಗ್ರಹ ದಳವನ್ನು ರಚಿಸಿ ಆಗಸ್ಟ್‌ನಲ್ಲಿ ರಾಜ್ಯ ಸರ್ಕಾರ ಆದೇಶಿಸಿತ್ತು. ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ನೂತನ ಕಾರ್ಯಪಡೆಗೆ ಚಾಲನೆ ನೀಡಿದರು.
ಹೇಗೆ ಕಾರ್ಯ ನಿರ್ವಹಿಸಲಿದೆ?
ಕೇಂದ್ರ ತನಿಖಾ ಸಂಸ್ಥೆಯಾಗಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮಾದರಿಯಲ್ಲಿ ಕಾರ್ಯ ನಿರ್ವಹಿಸಿಸಲಿರುವ ರಾಜ್ಯ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ, ಬೆಂಗಳೂರು ಸೇರಿದಂತೆ ರಾಜ್ಯದ ಇತರ ನಗರಗಳು ಮಾತ್ರವಲ್ಲದೆ ಜಿಲ್ಲೆಗಳಲ್ಲಿನ ಸಂಘಟಿತ ಮಾದಕವಸ್ತು ಜಾಲಗಳನ್ನು ಪತ್ತೆ ಹಚ್ಚಲು ಕಾರ್ಯ ನಿರ್ವಹಿಸಲಿದೆ. ಹಾಗೂ ಕೇಂದ್ರ ತನಿಖಾ ಸಂಸ್ಥೆಗಳೊಂದಿಗೆ ಸಮನ್ವಯತೆ ಸುಧಾರಿಸುವ ಗುರಿಯನ್ನು ಹೊಂದಿದೆ.
ಇದಕ್ಕಾಗಿ 10 ಹೊಸ ಹುದ್ದೆಗಳನ್ನು ರಚಿಸಲಾಗಿದೆ ಹಾಗೂ ನಕ್ಸಲ್ ನಿಗ್ರಹಪಡೆ (ANF) ಯಲ್ಲಿದ್ದ 56 ಸಿಬ್ಬಂದಿಯನ್ನು ಸೇರ್ಪಡೆಗೊಳಿಸಿಕೊಳ್ಳಲಾಗಿದೆ. ಹೊಸದಾಗಿ ರಚಿಸಲಾದ ಹುದ್ದೆಗಳಲ್ಲಿ ಇಬ್ಬರು ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್‌ಗಳು (Addl SP), ಇಬ್ಬರು ಉಪ ಪೊಲೀಸ್ ಸೂಪರಿಂಟೆಂಡೆಂಟ್‌ಗಳು (DSP), ಓರ್ವ ಸಹಾಯಕ ಆಡಳಿತ ಅಧಿಕಾರಿ, ಓರ್ವ ಸೆಕ್ಷನ್ ಸೂಪರಿಂಟೆಂಡೆಂಟ್, ಓರ್ವ ಕಿರಿಯ ಸಹಾಯಕ, ಓರ್ವ ಪ್ರಥಮ ದರ್ಜೆ ಸಹಾಯಕ, ಓರ್ವ ಸ್ಟೆನೋಗ್ರಾಫರ್ ಮತ್ತು ದಳಾಯತ್ ಇರಲಿದ್ದಾರೆ.
ಅಷ್ಟೆ ಅಲ್ಲದೇ ನಕ್ಸಲ್ ನಿಗ್ರಹ ಪಡೆಯಿಂದ ಸೇರ್ಪಡೆಗೊಳಿಸಲಾಗುವ 56 ಸಿಬ್ಬಂದಿಯಲ್ಲಿ ಇಬ್ಬರು ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮತ್ತು ನಾಲ್ವರು ಪೊಲೀಸ್ ಸಬ್ – ಇನ್‌ಸ್ಪೆಕ್ಟರ್‌ಗಳು, 20 ಹೆಡ್ ಕಾನ್ಸ್ಟೇಬಲ್ಗಳು ಮತ್ತು 30 ಕಾನ್ಸ್ಟೇಬಲ್ಗಳು ಇರಲಿದ್ದಾರೆ. ಬೆಂಗಳೂರೊಂದರಲ್ಲೇ ಪ್ರಸಕ್ತ ವರ್ಷ ಬರೋಬ್ಬರಿ 81.21 ಕೋಟಿ ರೂಪಾಯಿ ಮೌಲ್ಯದ ವಿವಿಧ ಮಾದಕ ಪದಾರ್ಥಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.








