ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ ಕಾಂಗ್ರೆಸ್ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಕ್ಷೇತ್ರದ ಅಭಿವೃದ್ಧಿಗಳಿಗೆ 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದರು. ಇದೀಗ ವಿರೋಧ ಪಕ್ಷದ ಶಾಸಕರಿಗೆ ಕೂಡ ಸಿಎಂ ಸಿದ್ದರಾಮಯ್ಯ ತಲಾ 25 ಕೋಟಿ ಅನುದಾನ ಬಿಡುಗಡೆಗೆ ತೀರ್ಮಾನಿಸಿದ್ದಾರೆ.
ಕೇವಲ ಕಾಂಗ್ರೆಸ್ ಶಾಸಕರಿಗೆ ಮಾತ್ರ ಅನುದಾನ ನೀಡಲಾಗುತ್ತಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಅಧಿವೇಶನದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ತಮಗೂ ಅನುದಾನ ಬಿಡುಗಡೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ವಿಪಕ್ಷಗಳ ಶಾಸಕರಿಗೂ ತಲಾ 25 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದಾರೆ.
ಅನುದಾನ ಹಂಚಿಕೆ ಸಂಬಂಧ ಪ್ರತಿಪಕ್ಷ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. 2025-26ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ ಘೋಷಿಸಿದಂತೆ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ತಮ್ಮ ವಿಧಾನಸಭಾ ಕ್ಷೇತ್ರಕ್ಕೆ 25 ಕೋಟಿ ರೂ. ವಿಶೇಷ ಅನುದಾನ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ. ಅದರನ್ವಯ ಕಾಮಗಾರಿವಾರು ಅನುದಾನದ ಹಂಚಿಕೆಯ ಪ್ರಮಾಣವನ್ನು ನಿಗದಿಪಡಿಸಿದ್ದು, ಇಲಾಖಾವಾರು ಕಾಮಗಾರಿಗಳ ವಿವರಗಳನ್ನು ಮುಂದಿನ ಕ್ರಮಕ್ಕಾಗಿ ಆರ್ಥಿಕ ಇಲಾಖೆಗೆ ಸಲ್ಲಿಸಲು ಕೋರಿದೆ ಎಂದಿದ್ದಾರೆ.
ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಡಿ ಬರುವ ರಸ್ತೆ ಮತ್ತು ಸೇತುವೆ ಕಾಮಗಾರಿಗಳು ಹಾಗೂ ನಗರಾಭಿವೃದ್ಧಿ ಇಲಾಖೆಯಡಿ ಬರುವ ನಗರ ಪ್ರದೇಶದ ಕಾಮಗಾರಿಗಳಿಗೆ 18.75 ಕೋಟಿ ರೂ. ಅನುದಾನ ನೀಡಲಾಗುವುದು. ಇತ್ತ ವಿವೇಚನಾಧಿಕಾರದಡಿ ವಿಧಾನಸಭಾ ಸದಸ್ಯರು ಆಯ್ಕೆ ಮಾಡಬಹುದಾದ ಇತರೆ ಇಲಾಖೆಯ ಕಾಮಗಾರಿಗಳಿಗೆ 6.25 ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ.