ಬೆಂಗಳೂರು : ಮುಡಾ ಹಗರಣದಲ್ಲಿ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಹೈಕೋರ್ಟ್ ಬಿಗ್ ಶಾಕ್ ನೀಡಿದ್ದು, ಇದರ ಬೆನ್ನಲ್ಲೇ ಇಂದು ಜನಪ್ರತಿನಿಧಿಗಳ ನ್ಯಾಯಾಲಯವು ಲೋಕಾಯುಕ್ತ ತನಿಖೆಗೆ ಆದೇಶ ಹೊರಡಿಸಿದೆ. ಇದರ ಬೆನ್ನೆಲ್ಲೆ, ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ಸಲ್ಲಿಸಿದ ದೂರುದಾರ ಪರ ವಕೀಲ ವಸಂತ್ ಕುಮಾರ್ ಈ ಒಂದು ಹಗರಣದಲ್ಲಿ ಸಿದ್ದರಾಮಯ್ಯರನ್ನು ಅರೆಸ್ಟ್ ಕೂಡ ಮಾಡಬಹುದು ಎಂದು ಸ್ಪೋಟಕ ಹೇಳಿಕೆ ನೀಡಿದರು.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಉತ್ತಮ ಆದೇಶ ಕೊಟ್ಟಿದೆ. ನಿನ್ನೆ ಹೈಕೋರ್ಟ್ ಕೊಟ್ಟ ತೀರ್ಪಿನ ಆದೇಶದ ಪ್ರತಿಯನ್ನು ನೀಡಿದ್ದೆವು. ಖಾಸಗಿ ದೂರಿಗೆ ನ್ಯಾಯ ಸಿಕ್ಕಿದೆ. 3 ತಿಂಗಳೊಳಗೆ ತನಿಖಾ ವರದಿ ಸಲ್ಲಿಸಲು ಲೋಕಾಯುಕ್ತಗೆ ಸೂಚನೆ ನೀಡಲಾಗಿದೆ. ಪ್ರಾಮಾಣಿಕವಾಗಿ ತನಿಖೆ ಆಗಬೇಕು ಅಂತಾ ಮನವಿ ಮಾಡುತ್ತೇವೆ ಎಂದಿದ್ದಾರೆ.
ಸಿಎಂ ಸ್ಥಾನದಲ್ಲಿ ಮುಂದುವರೆದರೆ ಪ್ರಾಮಾಣಿಕ ತನಿಖೆಯಾಗಲ್ಲ. ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಿದಾಗ ಎಫ್ಐಆರ್ ದಾಖಲಿಸಿ ತನಿಖೆ ಆಗಬೇಕು, ಅರೆಸ್ಟ್ ಕೂಡ ಮಾಡಬಹುದು. ಹೈಕೋರ್ಟ್ನಲ್ಲಿ ದಾವೆ ಹೂಡುತ್ತೇವೆ. ಆಪಾದನೆ ಬಂದಲ್ಲಿ ಅವರ ಮೇಲೆ ಎಫ್ಐಆರ್ ಆದರೆ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ಮಾಡುತ್ತಾರೆ. ಸಿಎಂ ರಾಜೀನಾಮೆ ಕೊಡಬೇಕಿದೆ. ತನಿಖಾಧಿಕಾರಿ ಯಾವ ರೀತಿ ಇರುತ್ತೆ ಅಂತ ನೋಡಬೇಕು ಎಂದು ಹೇಳಿದ್ದಾರೆ.