ನವದೆಹಲಿ : ದೇಶದಲ್ಲಿ ಆಹಾರೋದ್ಯಮಕ್ಕೆ ದೊಡ್ಡಮಟ್ಟದ ಪೆಟ್ಟು ನೀಡಿರುವುದಲ್ಲದೆ, ಜನಸಾಮಾನ್ಯರ ಅಡುಗೆ ಮನೆವರೆಗೂ ವ್ಯಾಪಿಸಿರುವ ಮಧ್ಯಪ್ರಾಚ್ಯ ಯುದ್ಧದ ಅಡ್ಡಪರಿಣಾಮ ಸ್ವಲ್ಪ ಮಟ್ಟಿಗೆ ನಿವಾರಣೆಯಾಗುವ ಲಕ್ಷಣಗಳು ಗೋಚರಿಸಿವೆ. ಇಂಧನ ಪೂರೈಕೆಯಲ್ಲಿ ಉಂಟಾಗಿದ್ದ ವ್ಯತ್ಯಯದಿಂದ ಕಂಗಾಲಾಗಿರುವ ಕಮರ್ಷಿಯಲ್ ಎಲ್ಪಿಜಿ ಬಳಕೆದಾರರಿಗೆ ಕೇಂದ್ರ ಸರ್ಕಾರ ಶನಿವಾರ ತುಸು ನಿರಾಳತೆ ನೀಡಿದೆ.
ದೇಶೀಯ ಉತ್ಪಾದನೆ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಾಣಿಜ್ಯ ಬಳಕೆಯ ಹಂಚಿಕೆಯನ್ನು ಕೇಂದ್ರ ಸರ್ಕಾರ ಶೇ. 20ರಷ್ಟು ಹೆಚ್ಚಳ ಮಾಡಿದೆ. ಈ ಮೂಲಕ ಒಟ್ಟು ಹಂಚಿಕೆ ಪ್ರಮಾಣ ಇದೀಗ ಶೇ. 50ಕ್ಕೆ ತಲುಪಿದೆ. ಹೀಗಾಗಿ ಈಗಾಗಲೇ ಬಂದ್ ಆಗಿರುವ ಹೋಟೆಲ್ಗಳು, ಕೈಗಾರಿಕೆ ಘಟಕಗಳಿಗೆ ತುಸು ನಿರಾಳತೆ ಸಿಗಲಿದ್ದು, ಹಂತ ಹಂತವಾಗಿ ಇವು ಪುನರಾರಂಭಗೊಳ್ಳುವ ನಿರೀಕ್ಷೆ ಇದೆ.
ಇರಾನ್ ವಿರುದ್ಧದ ಅಮೆರಿಕ- ಇಸ್ರೇಲ್ ಯುದ್ಧ ಕೊಲ್ಲಿ ರಾಷ್ಟ್ರಗಳಿಗೂ ವ್ಯಾಪಿಸಿದ್ದರಿಂದ ಭಾರತಕ್ಕೆ ಇಂಧನ ಪೂರೈಕೆಯಲ್ಲಿ ಅಡಚಣೆ ಉಂಟಾಗಿತ್ತು. ಹೀಗಾಗಿ ಗೃಹಬಳಕೆಯ ಅಡುಗೆ ಅನಿಲ ಪೂರೈಕೆಗೆ ಮೊದಲ ಆದ್ಯತೆ ನೀಡುವ ಸಲುವಾಗಿ ಹೋಟೆಲ್ ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಎಲ್ಪಿಜಿ ಪೂರೈಕೆಯನ್ನು ಕಡಿತಗೊಳಿಸಲಾಗಿತ್ತು. ನಂತರ ಪರಿಸ್ಥಿತಿ ತುಸು ಸುಧಾರಿಸಿದಾಗ ಶೇ. 20ರಷ್ಟು ಪೂರೈಕೆಯನ್ನು ಮರುಸ್ಥಾಪಿಸಲಾಗಿತ್ತು. ಜೊತೆಗೆ ಪೈಪ್ ಗ್ಯಾಸ್ (ಪಿಎನ್ಜಿ) ಯೋಜನೆಗಳನ್ನು ತ್ವರಿತಗೊಳಿಸುವ ಷರತ್ತಿನ ಮೇಲೆ ಶೇ. 10ರಷ್ಟು ಹೆಚ್ಚುವರಿ ಹಂಚಿಕೆ ಮಾಡಲಾಗಿತ್ತು. ಶನಿವಾರ ಮತ್ತೆ ಶೇ. 20ರಷ್ಟು ಹೆಚ್ಚುವರಿ ಹಂಚಿಕೆಯನ್ನು ಸರ್ಕಾರ ಪ್ರಕಟಿಸಿದೆ.
ಸುದ್ದಿಯ ಪ್ರಮುಖ ಅಂಶಗಳು:
ಹೆಚ್ಚುವರಿ ಪೂರೈಕೆ: ಈ ಹೊಸ ಆದೇಶದ ಪ್ರಕಾರ, ಹೋಟೆಲ್ಗಳು ಮತ್ತು ಡಾಬಾಗಳು ತಮ್ಮ ಈಗಿನ ನಿಗದಿತ ಮಿತಿಗಿಂತ ಶೇ. 20ರಷ್ಟು ಹೆಚ್ಚು ವಾಣಿಜ್ಯ ಸಿಲಿಂಡರ್ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ಯಾರಿಗೆ ಲಾಭ?: ಮುಖ್ಯವಾಗಿ ರಸ್ತೆ ಬದಿಯ ಡಾಬಾಗಳು, ಸಣ್ಣ ರೆಸ್ಟೋರೆಂಟ್ಗಳು, ಶಾಲಾ-ಕಾಲೇಜು ಮತ್ತು ಕಚೇರಿಗಳ ಕ್ಯಾಂಟೀನ್ಗಳಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.
ಕೊರತೆ ನೀಗಿಸುವ ಪ್ರಯತ್ನ: ಇತ್ತೀಚಿನ ದಿನಗಳಲ್ಲಿ ಕೆಲವು ಭಾಗಗಳಲ್ಲಿ ವಾಣಿಜ್ಯ ಸಿಲಿಂಡರ್ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ಹಬ್ಬದ ಸೀಸನ್ ಅಥವಾ ವಿಶೇಷ ಸಂದರ್ಭಗಳಲ್ಲಿ ಬೇಡಿಕೆ ಹೆಚ್ಚಾದಾಗ ಉಂಟಾಗುವ ಬಿಕ್ಕಟ್ಟನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಕಪ್ಪು ಮಾರುಕಟ್ಟೆಗೆ ಬ್ರೇಕ್: ವಾಣಿಜ್ಯ ಸಿಲಿಂಡರ್ಗಳ ಅಧಿಕೃತ ಪೂರೈಕೆ ಹೆಚ್ಚಾಗುವುದರಿಂದ, ಗೃಹ ಬಳಕೆಯ ಸಿಲಿಂಡರ್ಗಳನ್ನು (Domestic LPG) ವಾಣಿಜ್ಯ ಉದ್ದೇಶಕ್ಕೆ ಅಕ್ರಮವಾಗಿ ಬಳಸುವುದನ್ನು ತಡೆಯಬಹುದು ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ.








