ಬೆಂಗಳೂರು : ಕಾಮಗಾರಿ ಒಂದಕ್ಕೆ ಗುತ್ತಿಗೆದಾರನ ಬಳಿ 5 ಲಕ್ಷ ಪಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಉಲಮಾಣಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಜಾಮೀನು ಕೋರಿ ಚಂದ್ರು ಲಮಾಣಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ಅಲ್ಲದೇ, 2 ಲಕ್ಷ ರು.ಗಳ ವೈಯಕ್ತಿಕ ಬಾಂಡ್ ಮತ್ತು ಇಬ್ಬರು ಶ್ಯೂರಿಟಿ, ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ತಪ್ಪದೇ ಹಾಜರಾಗಬೇಕು.
ಪ್ರಕರಣದ ಸಾಕ್ಷಿಯಗಳಿಗೆ ನೇರ ಅಥಾವ ಪರೋಕ್ಷವಾಗಿ ಸಂಪರ್ಕಿಸಬಾರದು. ಅವರ ಮೇಲೆ ಪ್ರಭಾವ ಬೀರುವುದಕ್ಕೆ ಮುಂದಾಗಬಾರದು. ಸಾಕ್ಷ್ಯಗಳ ನಾಶಕ್ಕೆ ಪ್ರಯತ್ನಿಸಬಾರದು. ನ್ಯಾಯಾಲಯದಿಂದ ಲಿಖಿತ ಅನುಮತಿ ಪಡೆಯದೇ ದೇಶ ತೊರೆಯಬಾರದು, ತನಿಖೆ ಸಂದರ್ಭದಲ್ಲಿ ತನಿಖಾಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ನ್ಯಾಯಾಲಯ ಷರತ್ತುಗಳನ್ನು ವಿಧಿಸಿದೆ.








