ಬೆಂಗಳೂರು: ಸಿಲಿಕಾನ್ ಸಿಟಿಯಿಂದ ಬಿಹಾರಕ್ಕೆ ನೂರಾರು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ರೈಲೊಂದರಲ್ಲಿ ಚಲಿಸುತ್ತಿದ್ದಾಗಲೇ ಭಾರೀ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ನೂರಾರು ಜೀವಗಳು ಪ್ರಾಣಾಪಾಯದಿಂದ ಪಾರಾಗಿವೆ. ಬೆಂಗಳೂರಿನಿಂದ ಹೊರಟಿದ್ದ ವಿಶೇಷ ರೈಲಿನಲ್ಲಿ ಸಂಭವಿಸಿದ ಈ ಗಂಭೀರ ತಾಂತ್ರಿಕ ಲೋಪ ಮತ್ತು ಅದರಿಂದ ಎದುರಾಗಿದ್ದ ಭೀಕರ ಅಪಘಾತದ ಸನ್ನಿವೇಶ ತಡವಾಗಿ ಬೆಳಕಿಗೆ ಬಂದಿದೆ.
ಜಾಯಿಂಟ್ ವೀಲ್ ಕಟ್: ಎರಡು ಭಾಗವಾದ ರೈಲು ಮೇ 23 ರಂದು ತಡರಾತ್ರಿ 1 ಗಂಟೆ ಸುಮಾರಿಗೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ನಿಲ್ದಾಣದಿಂದ ಬಿಹಾರದ ದಾನಪೂರ್ಗೆ ವಿಶೇಷ ರೈಲು (ದಾನಪೂರ್ ಎಕ್ಸ್ಪ್ರೆಸ್) ಹೊರಟಿತ್ತು. ರೈಲು ಮೇ 24 ರಂದು ಆಂಧ್ರಪ್ರದೇಶದ ವಿಜಯವಾಡ ನಿಲ್ದಾಣವನ್ನು ದಾಟಿ ಸುಮಾರು 30 ಕಿಲೋಮೀಟರ್ ದೂರ ಸಾಗುತ್ತಿದ್ದಾಗ ಈ ಆಘಾತಕಾರಿ ಘಟನೆ ನಡೆದಿದೆ. ರೈಲು ಬೋಗಿಗಳನ್ನು ಪರಸ್ಪರ ಜೋಡಿಸುವ ಪ್ರಮುಖ ಕೊಂಡಿಯಾದ ‘ಜಾಯಿಂಟ್ ವೀಲ್’ ಚಲಿಸುತ್ತಿದ್ದಾಗಲೇ ಕಟ್ ಆಗಿದೆ.
ಗಂಟೆಗೆ 100 ಕಿಮೀ ವೇಗದಲ್ಲಿದ್ದಾಗ ಸಂಭವಿಸಿದ ದುರಂತ ಜಾಯಿಂಟ್ ವೀಲ್ ಕಟ್ ಆದ ಸಮಯದಲ್ಲಿ ರೈಲು ಗಂಟೆಗೆ ಸುಮಾರು 100 ಕಿಲೋಮೀಟರ್ನಷ್ಟು ಅತ್ಯಂತ ವೇಗದಲ್ಲಿ ಚಲಿಸುತ್ತಿತ್ತು. ಕೊಂಡಿ ಕಡಿತಗೊಂಡ ತಕ್ಷಣವೇ ಪ್ರಯಾಣಿಕರಿದ್ದ ಬೋಗಿಗಳು ಹಾಗೂ ಇಂಜಿನ್ ಇದ್ದ ಬೋಗಿ ಪರಸ್ಪರ ಬೇರ್ಪಟ್ಟಿವೆ. ಇಷ್ಟು ವೇಗದಲ್ಲಿ ಚಲಿಸುವಾಗ ಬೋಗಿಗಳು ಬೇರ್ಪಟ್ಟರೆ ರೈಲು ಹಳಿತಪ್ಪಿ ಉರುಳುವ ಅಥವಾ ಹಿಂದಿನ ಬೋಗಿಗಳು ಒಂದಕ್ಕೊಂದು ಡಿಕ್ಕಿ ಹೊಡೆಯುವ ಭೀಕರ ಅಪಾಯವಿರುತ್ತದೆ. ರೈಲಿನಲ್ಲಿದ್ದ ಪ್ರಯಾಣಿಕರು ಒಮ್ಮೆಗೇ ಆತಂಕಕ್ಕೆ ಒಳಗಾಗಿದ್ದರು.
ನಾಲ್ಕು ಗಂಟೆಗಳ ಕಾಲ ರೈಲು ಸಂಚಾರ ವಿಳಂಬ ಅದೃಷ್ಟವಶಾತ್ ಇಡೀ ಘಟನೆಯಲ್ಲಿ ರೈಲು ನಿಯಂತ್ರಣ ಕಳೆದುಕೊಳ್ಳದ ಕಾರಣ ಯಾವುದೇ ಪ್ರಾಣಹಾನಿ ಅಥವಾ ಯಾರಿಗೂ ಗಾಯಗಳಾದ ವರದಿಯಾಗಿಲ್ಲ. ಘಟನೆಯ ನಂತರ ರೈಲ್ವೆ ತಾಂತ್ರಿಕ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಕಡಿತಗೊಂಡಿದ್ದ ಬೋಗಿಗಳನ್ನು ಮರುಜೋಡಣೆ ಮಾಡುವ ಮತ್ತು ತಾಂತ್ರಿಕ ದೋಷವನ್ನು ಸರಿಪಡಿಸುವ ಕಾರ್ಯಾಚರಣೆ ನಡೆಸಿದರು. ಈ ದುರಸ್ತಿ ಕಾರ್ಯದಿಂದಾಗಿ ರೈಲು ಸಂಚಾರ ಸುಮಾರು 4 ಗಂಟೆಗಳ ಕಾಲ ವಿಳಂಬಗೊಂಡು, ನಂತರ ಬಿಹಾರದತ್ತ ಪ್ರಯಾಣ ಬೆಳೆಸಿತು.








