ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಮೂಡಿದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಪ್ರಿಯಕರನೇ ತನ್ನ ಪ್ರೇಯಸಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬೆಳ್ಳಂದೂರಿನಲ್ಲಿ ನಡೆದಿದೆ.
ಕೊಲೆಯಾದ ದುರ್ದೈವಿಯನ್ನು ಸಿಕ್ಕಿಂ ಮೂಲದ ಹಂಗ್ಮಾ (22) ಎಂದು ಗುರುತಿಸಲಾಗಿದೆ. ಈಕೆಯನ್ನು ಅದೇ ರಾಜ್ಯದ ಪುರ್ಬಾ ಲೇಪ್ಸಾ ಎಂಬಾತ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಇಬ್ಬರೂ ಬೆಂಗಳೂರಿನಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಪುರ್ಬಾ ಲೇಪ್ಸಾ ತನ್ನ ಪ್ರೇಯಸಿ ಹಂಗ್ಮಾಗೆ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. ಆದರೆ ಹಂಗ್ಮಾ, ನನಗೆ ಈಗಲೇ ಮದುವೆ ಬೇಡ ಎಂದು ನಿರಾಕರಿಸಿದ್ದಳು. ಇದೇ ವಿಷಯವಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಇದಲ್ಲದೆ, ಹಂಗ್ಮಾ ಬೇರೊಬ್ಬ ಯುವಕನ ಜೊತೆ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನವೂ ಪುರ್ಬಾಗೆ ಇತ್ತು ಎನ್ನಲಾಗಿದೆ.ಇದೇ ಕೋಪದಲ್ಲಿ ಆರೋಪಿ ಪುರ್ಬಾ ಲೇಪ್ಸಾ, ಪ್ರೇಯಸಿ ಹಂಗ್ಮಾಳಿಗೆ ಚಾಕುವಿನಿಂದ ಮನಸೋಇಚ್ಛೆ ಇರಿದು ಹತ್ಯೆ ಮಾಡಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಧಾವಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿಯ ಬಂಧನ ಹಾಗೂ ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.








