ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರ ಧರ್ಮಪತ್ನಿ ಒಬ್ಬರಿಗೇ ಸೈಟ್ ಕೊಟ್ಟಿಲ್ಲ. ಇನ್ನೂ ಹಲವರಿಗೆ ಕೊಟ್ಟ ನಿದರ್ಶನ ಇದೆ. ನಮ್ಮಬಿಜೆಪಿ ಸರ್ಕಾರ ಇದ್ದಾಗಲೇ ಕೊಟ್ಟಿದ್ದು. ಕಾನೂನಿನ ಪ್ರಕಾರವೇ ಸೈಟು ನೀಡಲಾಗಿದೆ, ಬಿಜೆಪಿ ಈಗ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ತಮ್ಮ ಸ್ವಪಕ್ಷದ ವಿರುದ್ಧವೆ ಬೆಂಗಳೂರು ನಗರ ಯಶವಂತಪುರ ವಿಧಾನಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಕಿಡಿಕಾರಿದರು.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸೈಟುಗಳು ಬಿಜೆಪಿ ಸರ್ಕಾರ ಅಸ್ಥಿತ್ವದಲ್ಲಿದ್ದಾಗಲೇ ಬಿಜೆಪಿ ಸರ್ಕಾರವೇ ನೀಡಿತ್ತು.ಈ ಸಂದರ್ಭದಲ್ಲಿ ಕೇವಲ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಮಾತ್ರವಲ್ಲ, ಅನೇಕ ಬೇರೆ ಮುಖಂಡರಿಗೆ ಸೈಟ್ ವಿತರಿಸಲಾಗಿದೆ, ಅದನ್ನೂ ಕೂಡ ತನಿಖೆ ನಡೆಸಬೇಕು ಎಂದು ಸೋಮಶೇಖರ್ ಲೋಕಾಯುಕ್ತವನ್ನು ಆಗ್ರಹಿಸಿದ್ದಾರೆ.
ಸೈಟ್ ವಾಪಸ್ ಕೊಡಲು ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪತ್ರ ಬರೆದಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಸೈಟ್ ಅಲಾಟ್ ಆಗಿತ್ತು. ಅಂದಿನ ರಾಜ್ಯ ಸರ್ಕಾರವೇ ಸೈಟ್ ಅಲಾಟ್ ಮಾಡಿದೆ. ಡೆವಲಪ್ಮೆಂಟ್ ಆದ ಕಡೆ ಸೈಟ್ ಕೊಡಬೇಕು ಅಂತ ಬಿಜೆಪಿ ಸರ್ಕಾರದಲ್ಲೇ ನಿರ್ಧಾರ ಆಗಿತ್ತು ಎಂದು ಅಂದಿನ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ.