ಬೆಂಗಳೂರು : ಬಿಟ್ ಕಾಯಿನ್ ಹಗರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶ್ರೀ ಕೃಷ್ಣ ಅಲಿಯಾಸ್ ಶ್ರೀಕಿ ಸೇರಿದಂತೆ ಮೂವರನ್ನು ಇದೀಗ ಇಡಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಶ್ರೀ ಕೃಷ್ಣ ಅಲಿಯಾಸ್ ಶ್ರೀಕಿ, ರಾಬಿನ್ ಖಂಡೇವಾಲ ಮತ್ತು ಸುನೀಶ್ ಹೆಗಡೆ ಎನ್ನುವವರನ್ನು ಇಡಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಈ ಬಿಟ್‌ಕಾಯಿನ್ ಹಗರಣದ ಜಾಡನ್ನು ಹಿಡಿದಿದ್ದ ಇಡಿ ಅಧಿಕಾರಿಗಳು, ತನಿಖೆಯನ್ನು ತೀವ್ರಗೊಳಿಸಿದ್ದರು. ಬಿಟ್‌ಕಾಯಿನ್ ವಿನಿಮಯ ಕೇಂದ್ರಗಳನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ಮೌಲ್ಯದ ಡಿಜಿಟಲ್ ಹಣವನ್ನು ಲೂಟಿ ಮಾಡಿದ ಆರೋಪ ಇವರ ಮೇಲಿದೆ. ಈ ಹಿಂದೆ ಸಿಸಿಬಿ ಪೊಲೀಸರು ನಡೆಸಿದ್ದ ತನಿಖೆಯ ಆಧಾರದ ಮೇಲೆ ಇಡಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿತ್ತು.
ಬಂಧಿತ ಆರೋಪಿಗಳಾದ ಶ್ರೀಕಿ ಮತ್ತು ಆತನ ತಂಡವು ಸರ್ಕಾರಿ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಹ್ಯಾಕ್ ಮಾಡಿ ಹಣ ವರ್ಗಾವಣೆ ಮಾಡಿದ ಆರೋಪವನ್ನೂ ಎದುರಿಸುತ್ತಿದ್ದಾರೆ. ಕಳ್ಳತನ ಮಾಡಿದ ಬಿಟ್‌ಕಾಯಿನ್‌ಗಳನ್ನು ನಗದೀಕರಿಸಲು ರಾಬಿನ್ ಖಂಡೇವಾಲ ಮತ್ತು ಸುನೀಶ್ ಹೆಗಡೆ ನೆರವಾಗುತ್ತಿದ್ದರು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಇವರು ಅಕ್ರಮವಾಗಿ ಗಳಿಸಿದ ಹಣವನ್ನು ಬೇರೆ ಬೇರೆ ಕಡೆ ಹೂಡಿಕೆ ಮಾಡಿರುವ ಬಗ್ಗೆಯೂ ಇಡಿ ಮಾಹಿತಿ ಕಲೆಹಾಕುತ್ತಿದೆ.
ಪ್ರಸ್ತುತ ಬಂಧಿತ ಮೂವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹಗರಣದ ಹಿಂದೆ ಇರುವ ಪ್ರಭಾವಿ ವ್ಯಕ್ತಿಗಳು ಯಾರು? ಲೂಟಿ ಮಾಡಿದ ಹಣ ಯಾರ ಕೈ ಸೇರಿದೆ? ಎಂಬ ಅಂಶಗಳನ್ನು ಹೊರತೆಗೆಯಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಬಂಧನದಿಂದ ಬಿಟ್‌ಕಾಯಿನ್ ಹಗರಣದ ತನಿಖೆಗೆ ಹೊಸ ತಿರುವು ಸಿಕ್ಕಂತಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಫೋಟಕ ಮಾಹಿತಿ ಹೊರಬರುವ ಸಾಧ್ಯತೆಯಿದೆ.








