ಬೆಂಗಳೂರು: ನಾಳೆ (ಮೇ 31) ಅಹಮದಾಬಾದ್ನಲ್ಲಿ ನಡೆಯಲಿರುವ ಐಪಿಎಲ್ (IPL) ಫೈನಲ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಿಗ್ ಅಪ್ಡೇಟ್ ಒಂದಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಬ್ರೇಕ್ ಹಾಕಿದೆ. ಆರ್ಸಿಬಿ (RCB) ಅಭಿಮಾನಿಗಳಿಗೆ ಉಚಿತ ನಮ್ಮ ಮೆಟ್ರೋ ಪ್ರಯಾಣ ಸೌಲಭ್ಯ ಇರಲಿದೆ ಎಂದು ಹರಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು ಎಂದು ಬಿಎಂಆರ್ಸಿಎಲ್ ಅಧಿಕೃತವಾಗಿ ಸ್ಪಷ್ಟಪಡಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಪ್ರಚಾರ
ಕೆಲವು ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ಹಾಗೂ ಸಂದೇಶಗಳನ್ನು ಪ್ರಕಟಿಸಿ, ಮೇ 31ರಂದು ಆರ್ಸಿಬಿ ಅಭಿಮಾನಿಗಳಿಗೆ ಉಚಿತ ಮೆಟ್ರೋ ಪ್ರಯಾಣ ಸೌಲಭ್ಯವಿರಲಿದೆ ಎಂದು ತಪ್ಪು ಮಾಹಿತಿ ಹರಡುತ್ತಿರುವುದು ನಿಗಮದ ಗಮನಕ್ಕೆ ಬಂದಿದೆ. ಈ ಗೊಂದಲ ನಿವಾರಿಸಲು ಬಿಎಂಆರ್ಸಿಎಲ್ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.
ನಿಗಮವು ತನ್ನ ಪ್ರಕಟಣೆಯಲ್ಲಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಸ್ಪಷ್ಟಪಡಿಸಿದೆ:
-
ಉಚಿತ ಪ್ರಯಾಣದ ಯೋಜನೆ ಇಲ್ಲ: ಮೇ 31ರಂದು ಆರ್ಸಿಬಿ ಅಭಿಮಾನಿಗಳಿಗೆ ಅಥವಾ ಯಾವುದೇ ಇತರೆ ಪ್ರಯಾಣಿಕ ವರ್ಗಕ್ಕೆ ಉಚಿತವಾಗಿ ಮೆಟ್ರೋ ಪ್ರಯಾಣ ಒದಗಿಸುವ ಯಾವುದೇ ಯೋಜನೆಯನ್ನು ಬಿಎಂಆರ್ಸಿಎಲ್ ಘೋಷಿಸಿಲ್ಲ ಹಾಗೂ ಅನುಮೋದಿಸಿಲ್ಲ.
-
ಯಾರಿಗೂ ಅನುಮತಿ ನೀಡಿಲ್ಲ: ಮೆಟ್ರೋ ಪ್ರಯಾಣ ಉಚಿತವಾಗಿರುತ್ತದೆ ಎಂದು ಜಾಹೀರಾತು ನೀಡಲು ಅಥವಾ ಪ್ರಚಾರ ಮಾಡಲು ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ಸಂಘಟನೆಗೆ ಬಿಎಂಆರ್ಸಿಎಲ್ ಯಾವುದೇ ಅಧಿಕೃತ ಮಾನ್ಯತೆ ನೀಡಿರುವುದಿಲ್ಲ.
-
ನಿಯಮಿತ ಟಿಕೆಟ್ ಕಡ್ಡಾಯ: ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಲು ಎಲ್ಲಾ ಪ್ರಯಾಣಿಕರು ಎಂದಿನಂತೆ ಟಿಕೆಟ್ ಖರೀದಿಸಬೇಕು. ಅಥವಾ ಸ್ಮಾರ್ಟ್ ಕಾರ್ಡ್, ಕ್ಯೂಆರ್ ಟಿಕೆಟ್ (QR Ticket), ಎನ್ಸಿಎಂಸಿ ಕಾರ್ಡ್ (NCMC) ಬಳಸಿಯೇ ಪ್ರಯಾಣಿಸಬೇಕು. ಎಲ್ಲವೂ ಪ್ರಚಲಿತ ದರ ನಿಯಮಗಳಿಗೇ ಒಳಪಟ್ಟಿರುತ್ತವೆ.
ಅಧಿಕೃತ ಮಾಹಿತಿ ಮಾತ್ರ ನಂಬಿ “ಸಾರ್ವಜನಿಕರು ಅನಧಿಕೃತ ಸಾಮಾಜಿಕ ಜಾಲತಾಣದ ಪೋಸ್ಟ್ಗಳು, ಜಾಹೀರಾತುಗಳು ಅಥವಾ ಸಂದೇಶಗಳನ್ನು ನಂಬಬಾರದು. ನಿಖರ ಮಾಹಿತಿಗಾಗಿ ಬಿಎಂಆರ್ಸಿಎಲ್ನ ಅಧಿಕೃತ ಪ್ರಕಟಣೆಗಳು ಮತ್ತು ಅಧಿಕೃತ ಮಾಧ್ಯಮಗಳನ್ನು ಮಾತ್ರ ಅವಲಂಬಿಸಬೇಕು” ಎಂದು ನಿಗಮವು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದೆ.
ಸುರಕ್ಷಿತ ಹಾಗೂ ಸುಗಮ ಮೆಟ್ರೋ ಸೇವೆ ಒದಗಿಸಲು ಬದ್ಧವಾಗಿರುವ ನಿಗಮವು, ಇಂತಹ ತಪ್ಪು ಮಾಹಿತಿಯ ಪ್ರಸಾರವನ್ನು ತಡೆಯಲು ಸಾರ್ವಜನಿಕರ ಸಹಕಾರವನ್ನು ಕೋರಿದೆ.
ದೆಹಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ISI ಲಿಂಕ್ ಹೊಂದಿದ್ದ 9 ಶಂಕಿತರ ಬಂಧನ!
ನೆಚ್ಚಿನ ನಾಯಕನ ‘ಸಿಎಂ ಪಟ್ಟ’ಕ್ಕಾಗಿ 3 ವರ್ಷಗಳ ‘ತಪಸ್ಸು’: ಕೊನೆಗೂ ಫಲಿಸಿತು ‘ಡಿಕೆಶಿ ಅಭಿಮಾನಿ’ಯ ಸಂಕಲ್ಪ!








