ಬೆಂಗಳೂರು : ಕರ್ನಾಟಕ ಸರ್ಕಾರ ಗೃಹ ಲಕ್ಷ್ಮಿ ಮತ್ತು ಗೃಹ ಜ್ಯೋತಿ ಯೋಜನೆಗಳ ಫಲಾನುಭವಿಗಳ ಪಟ್ಟಿ ಪರಿಷ್ಕರಿಸಲು ನಿರ್ಧರಿಸಿದೆ. ಮೃತಪಟ್ಟವರು, ಆದಾಯ ತೆರಿಗೆ ಪಾವತಿದಾರರು ಮತ್ತು ಒಂದೇ ಮನೆಯಲ್ಲಿ ಇಬ್ಬರು ಲಾಭ ಪಡೆಯುವ ಅನರ್ಹರನ್ನು ಪಟ್ಟಿಯಿಂದ ತೆಗೆದುಹಾಕಿ, ಅರ್ಹ ಬಡವರಿಗೆ ಮಾತ್ರ ಯೋಜನೆ ತಲುಪಿಸಲು ಮುಂದಾಗಿದೆ.
ಹೌದು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಾದ ಗೃಹ ಲಕ್ಷ್ಮಿ (ಮಹಿಳೆಯರಿಗೆ ಮಾಸಿಕ 2,000 ರೂ.) ಹಾಗೂ ಗೃಹ ಜ್ಯೋತಿ (ಉಚಿತ ವಿದ್ಯುತ್) ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಸಮಗ್ರವಾಗಿ ಪರಿಶೀಲಿಸಲು ತೀರ್ಮಾನಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ಬರೋಬ್ಬರಿ 1 ಕೋಟಿ 24 ಲಕ್ಷಕ್ಕೂ ಹೆಚ್ಚು ಗೃಹಲಕ್ಷ್ಮಿ ಫಲಾನುಭವಿಗಳಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಫಲಾನುಭವಿಗಳ ಪಟ್ಟಿಯಲ್ಲಿ ಹಲವು ತಾಂತ್ರಿಕ ದೋಷಗಳು ಹಾಗೂ ನಿಯಮ ಉಲ್ಲಂಘನೆಗಳು ಪತ್ತೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಪರಿಷ್ಕರಣೆಗೆ ಪ್ರಮುಖ ಕಾರಣ
ಪರಿಷ್ಕರಣೆಗೆ ಪ್ರಮುಖ ಕಾರಣ ಎಂದರೆ, ಮೃತಪಟ್ಟ ಫಲಾನುಭವಿಗಳಿಗೂ ಸಹ ಹಣ ಸಂದಾಯವಾಗುತ್ತಿದೆ. ಅಲ್ಲದೇ ತೆರಿಗೆ ಕಟ್ಟುವವರು ಸಹ ಗ್ಯಾರಂಟಿ ಯೋಜನೆ ಪಡೆಯುತ್ತಿದ್ದಾರೆ.ಹಾಗು ಒಂದೇ ಮನೆಯಲ್ಲಿ ಇಬ್ಬರು ಗ್ಯಾರಂಟಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಈ ಎರಡು ಯೋಜನೆಗಳ ಪರಿಷ್ಕರಣೆಗೆ ಮುಂದಾಗಿದೆ.








