ಬೆಂಗಳೂರು : ಚುನಾವಣಾ ಬಾಂಡ್ ಹೆಸರಿನಲ್ಲಿ ಸುಲಿಗೆ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣವನ್ನು ರದ್ದುಗೊಳಿಸುವಂತೆ ನಳಿನ್ ಕುಮಾರ್ ಕಟೀಲು ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು. ಇದೀಗ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠವು ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ನಳಿನ್ ಕುಮಾರ್ ಕಟೀಲ್ ಪರ ಕೆಜಿ ರಾಘವನ್ ವಾದ ಮಂಡಿಸಿದ್ದು, ಸುಲಿಗೆ ವ್ಯಾಖ್ಯಾನದ ಸನಿಹದಲ್ಲೂ ಆರೋಪ ಬರುವುದಿಲ್ಲ. ಜಾರಿ ನಿರ್ದೇಶನಾಲಯವನ್ನು ಆರೋಪಿಯನ್ನಾಗಿಸಲಾಗಿದೆ ಎಂದು ಜಡ್ಜ್ ಮುಂದೆ ತಿಳಿಸಿದರು.ಈ ವೇಳೆ ದೂರುದಾರ ಆದರ್ಶ ಅಯ್ಯರ್ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿದ್ದು, ಇಡಿ ಭಯದಲ್ಲಿ ರಾಜಕೀಯ ಪಕ್ಷಕ್ಕೆ ದೇಣಿಗೆ ಸಂಗ್ರಹಿಸಲಾಗಿದೆ.ಇದು ಸುಲಿಗೆ ಅಲ್ಲದೆ ಮತ್ತೇನು ಅಲ್ಲವೆಂದು ಪ್ರಶಾಂತ ಭೂಷಣ್ ವಾದಿಸಿದರು.
ಈ ವೇಳೆ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾ. ಎಂ. ನಾಗ ಪ್ರಸನ್ನ ಅವರು ಸುಲಿಗೆ ಎಂದರೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಿರಬೇಕು.ಸುಲಿಗೆಗೆ ಒಳಗಾದವರೇ ಪೊಲೀಸರಿಗೆ ದೂರು ನೀಡಬೇಕು ಆದರೆ ದೂರುದಾರ ತಾವು ಸುಲಿಗೆಗೆ ಒಳಗಾಗಿದ್ದೇನೆ ಎಂದು ಹೇಳಿಲ್ಲ ಎಂದು ಹೈಕೋರ್ಟ್ ನ್ಯಾಯಾಧೀಶರಾದ ಎಂ.ನಾಗ ಪ್ರಸನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಈ ಪ್ರಕರಣಕ್ಕೆ ಇದೀಗ ಹೈಕೋರ್ಟ್ ಏಕ ಸದಸ್ಯ ಪೀಠದಿಂದ ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ.