ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಎಂಟನೇ ಆರೋಪಿಯಾಗಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅವರಿಗೆ ನಾಳೆ ಅತ್ಯಂತ ಮಹತ್ವದ ದಿನವಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದ್ದು, ಅವರ ಮುಂದಿನ ಭವಿಷ್ಯ ಹಾಗೂ ಜೈಲು ವಾಸದ ಅಂತ್ಯದ ಬಗ್ಗೆ ನಾಳೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.
ಈ ಪ್ರಮುಖ ವಿಚಾರಣೆಯು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ನ್ಯಾಯಮೂರ್ತಿ ವಿಜಯ್ ಬಿಷ್ನೋಯಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠದಲ್ಲಿ ನಡೆಯಲಿದೆ. ಈಗಾಗಲೇ ಹೈಕೋರ್ಟ್‌ನಲ್ಲಿ ಜಾಮೀನು ನಿರಾಕರಿಸಲ್ಪಟ್ಟಿರುವ ಹಿನ್ನೆಲೆಯಲ್ಲಿ, ದರ್ಶನ್ ಪರ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಈ ಬಾರಿ ಪ್ರಬಲ ವಾದ ಮಂಡಿಸಲು ಸಜ್ಜಾಗಿದ್ದಾರೆ.
ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಿಂದ ಸಮಗ್ರ ವರದಿಯನ್ನು ಕೇಳಿತ್ತು. ಈ ವರದಿಯಲ್ಲಿ ಪ್ರಮುಖವಾಗಿ ಪ್ರಕರಣದ ಪ್ರಗತಿಯ ಬಗ್ಗೆ ಪ್ರಶ್ನಿಸಲಾಗಿತ್ತು. ಇದುವರೆಗೆ ಎಷ್ಟು ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದೆ? ಇನ್ನೂ ಎಷ್ಟು ಸಾಕ್ಷಿಗಳು ಬಾಕಿ ಇದ್ದಾರೆ? ಮತ್ತು ಇಡೀ ವಿಚಾರಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲು ಅಂದಾಜು ಎಷ್ಟು ಸಮಯ ಬೇಕಾಗಬಹುದು ಎಂಬ ಮಾಹಿತಿಯನ್ನು ನ್ಯಾಯಾಲಯ ಕೇಳಿತ್ತು.
ಕೇವಲ ವಿಚಾರಣೆಯ ಪ್ರಗತಿ ಮಾತ್ರವಲ್ಲದೆ, ಜೈಲಿನಲ್ಲಿ ದರ್ಶನ್ ಅವರಿಗೆ ಬೇಕಾದ ಮೂಲ ಸೌಲಭ್ಯಗಳನ್ನು ಒದಗಿಸಲಾಗಿದೆಯೇ ಎಂಬ ಬಗ್ಗೆಯೂ ನ್ಯಾಯಾಲಯ ಮಾಹಿತಿ ಬಯಸಿತ್ತು. ಈ ಎಲ್ಲಾ ಅಂಶಗಳನ್ನು ಒಳಗೊಂಡ ವರದಿಯು ನಾಳೆ ಪೀಠದ ಮುಂದೆ ಬರಲಿದ್ದು, ವರದಿಯಲ್ಲಿರುವ ಅಂಶಗಳು ದರ್ಶನ್ ಅವರ ಜಾಮೀನು ಅರ್ಜಿಯ ಮೇಲೆ ನೇರ ಪರಿಣಾಮ ಬೀರಲಿವೆ.








