ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದಂತಹ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ, ತೆಲುಗು ನಟಿ ಹೇಮಾ ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಆದರೆ ಇದೀಗ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದ್ದು, ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ ಶೀಟ್ ನಲ್ಲಿ ಹೇಮಾ ಮಾದಕ ದ್ರವ್ಯ ಸೇವಿಸಿದ್ದನ್ನು ಉಲ್ಲೇಖಿಸಿದ್ದಾರೆ.
ಹೌದು ಬೆಂಗಳೂರು ರೇವ್ ಪಾರ್ಟಿ ಪ್ರಕರಣದ ಬಗ್ಗೆ ಪೊಲೀಸರು ಇತ್ತೀಚೆಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಅದರಲ್ಲಿ ನಟಿ ಹೇಮಾ ಸೇರಿದಂತೆ ಒಟ್ಟು 88 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಹೇಮಾ ಅವರಿಗೆ ಆಘಾತ ನೀಡುವಂತೆ ಅವರು ಮಾದಕ ವಸ್ತುಗಳನ್ನು ಸೇವಿಸಿದ್ದಾರೆ ಎಂದು ಪೊಲೀಸರು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.ಒಟ್ಟು 1000 ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಅನ್ನು ಪೊಲೀಸರು ಸಲ್ಲಿಸಿದ್ದಾರೆ. ಹೇಮಾ ಬಳಸಿದ ಮಾದಕ ವಸ್ತುಗಳ ಬಗ್ಗೆಯೂ ಪೊಲೀಸರು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಚಾರ್ಜ್ ಶೀಟ್ ಸಲ್ಲಿಕೆ ಬಗ್ಗೆ ಹೇಮಾ ಇತ್ತೀಚೆಗೆ ತನ್ನ ವಿವರಣೆ ನೀಡುತ್ತಾ ಒಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ನನ್ನ ವಕೀಲರು ಕರೆ ಮಾಡಿ ಅಧಿಕೃತವಾಗಿ ಚಾರ್ಜ್ ಶೀಟ್‌ನಲ್ಲಿ ನನಗೆ ನೆಗೆಟಿವ್ ಬಂದಿದೆ.ಚಾರ್ಜ್ ಶೀಟ್‌ನಲ್ಲಿ ನನ್ನ ರಕ್ತ, ಕೂದಲು, ಉಗುರುಗಳು ಹೀಗೆ ಎಲ್ಲವೂ ನೆಗೆಟಿವ್ ಬಂದಿದೆ.ನಾನು ಮಾಡಿಸಿಕೊಂಡ ಪರೀಕ್ಷೆಗಳಲ್ಲಿಯೂ ನೆಗೆಟಿವ್ ಬಂದಿದೆ. ನನಗೆ ತುಂಬಾ ಖುಷಿಯಾಗಿದೆ ಎಂದು ಹೇಮಾ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ.
ಆದರೆ ಹೇಮಾ ಅವರು MDMA ಮಾದಕ ವಸ್ತುವನ್ನು ಸೇವಿಸಿದ್ದಾರೆ ಎಂದು ಖಚಿತಪಡಿಸಲಾಗಿದೆ. NDPS ಕಾಯ್ದೆ ಸೆಕ್ಷನ್ 27 ರ ಅಡಿಯಲ್ಲಿ ಹೇಮಾ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ, ತಾನು ಯಾವುದೇ ಮಾದಕ ವಸ್ತುಗಳನ್ನು ಸೇವಿಸಿಲ್ಲ ಎಂದು ಹೇಮಾ ಇತ್ತೀಚೆಗೆ ಮಾಧ್ಯಮಗಳಿಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದರು.