ಬೆಂಗಳೂರು : ರಾಜ್ಯ ರಾಜಕಾರಣದ ದಿಢೀರ್ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ, ರಾಜ್ಯ ಸಚಿವ ಸಂಪುಟ ಅಧಿಕೃತವಾಗಿ ವಿಸರ್ಜನೆಗೊಂಡಿದೆ. ನಿನ್ನೆ ಮುಖ್ಯಮಂತ್ರಿಗಳು ನೀಡಿದ್ದ ರಾಜೀನಾಮೆಯನ್ನು ಇಂದು ರಾಜ್ಯಪಾಲರು ಅಂಗೀಕರಿಸಿದ್ದಾರೆ. ಈ ಪ್ರಮುಖ ರಾಜಕೀಯ ಸ್ಥಿತ್ಯಂತರದ ಬೆನ್ನಲ್ಲೇ, ರಾಜಧಾನಿ ಬೆಂಗಳೂರಿನಲ್ಲಿ ಆಡಳಿತಾರೂಢ ಸಚಿವರ ಅಧಿಕೃತ ಸೌಲಭ್ಯಗಳನ್ನು ಹಿಂಪಡೆಯುವ ಪ್ರಕ್ರಿಯೆ ಬಿರುಸಿನಿಂದ ಆರಂಭವಾಗಿದೆ.
ಸಚಿವ ಸಂಪುಟ ವಿಸರ್ಜನೆಯಾಗುತ್ತಿದ್ದಂತೆ, ಈವರೆಗೆ ಸಚಿವರಿಗೆ ಹಂಚಿಕೆಯಾಗಿದ್ದ ಅಧಿಕೃತ ಸರ್ಕಾರಿ ವಾಹನಗಳನ್ನು ಸರ್ಕಾರ ತಕ್ಷಣವೇ ವಾಪಸ್ ಪಡೆದಿದೆ. ಇದರಿಂದಾಗಿ ಹಾಲಿ ಸಚಿವರಾಗಿದ್ದ ನಾಯಕರುಗಳು ಇದೀಗ ಮಾಜಿಗಳಾಗಿದ್ದು, ತಮ್ಮ ಅಧಿಕೃತ ಸರ್ಕಾರಿ ಕಾರುಗಳನ್ನು ಬಿಟ್ಟು ಖಾಸಗಿ ವಾಹನಗಳಿಗೆ ಶಿಫ್ಟ್ ಆಗುತ್ತಿದ್ದಾರೆ. ಬೆಂಗಳೂರಿನ ಸಚಿವರ ನಿವಾಸಗಳ ಮುಂದೆ ನಿಲ್ಲುತ್ತಿದ್ದ ಸರ್ಕಾರಿ ವಾಹನಗಳು ಇದೀಗ ಸಿಬ್ಬಂದಿ ಹಾಗೂ ಸಚಿವಾಲಯದ ವಶಕ್ಕೆ ಮರಳಿವೆ.
ಮತ್ತೊಂದೆಡೆ, ಸಚಿವರಿಗೆ ನೀಡಲಾಗಿದ್ದ ಸರ್ಕಾರಿ ನಿವಾಸಗಳ ಮುಂದಿದ್ದ ನಾಮಫಲಕಗಳನ್ನು ತೆರವುಗೊಳಿಸುವ ಕಾರ್ಯವೂ ಸಾಗುತ್ತಿದೆ. ಸಚಿವರಾಗಿದ್ದ ನಾಯಕರುಗಳು ತಾವಾಗಿಯೇ ತಮ್ಮ ಹೆಸರಿನ ಬೋರ್ಡ್ಗಳನ್ನು ತೆಗೆಸುತ್ತಿದ್ದಾರೆ. ಪ್ರಮುಖವಾಗಿ, ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರ ಸರ್ಕಾರಿ ನಿವಾಸದಲ್ಲಿದ್ದ ಸಚಿವರ ಹೆಸರಿನ ನಾಮಫಲಕವನ್ನು ತೆರವುಗೊಳಿಸಲಾಗಿದೆ.
ಯಾವ ನಿವಾಸಗಳಲ್ಲಿ ನಾಮಫಲಕಗಳನ್ನು ಸಂಪೂರ್ಣವಾಗಿ ತೆಗೆಯಲು ಸಾಧ್ಯವಾಗಿಲ್ಲವೋ, ಅಲ್ಲಿ ಸಿಬ್ಬಂದಿಗಳು ಸಚಿವರ ಹೆಸರಿನ ಬೋರ್ಡ್ಗಳಿಗೆ ಪೇಪರ್ ಅಂಟಿಸಿ ಮುಚ್ಚುತ್ತಿರುವುದು ಕಂಡುಬಂದಿದೆ. ಅಧಿಕಾರ ಕೈತಪ್ಪಿದ ಕೆಲವೇ ಗಂಟೆಗಳಲ್ಲಿ ಸಚಿವರ ಬಂಗಲೆಗಳ ಚಿತ್ರಣ ಸಂಪೂರ್ಣವಾಗಿ ಬದಲಾಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ರಾಜೀನಾಮೆ ಅಂಗೀಕಾರದೊಂದಿಗೆ ಒಂದು ಅವಧಿ ಮುಕ್ತಾಯವಾಗಿದ್ದು, ಮುಂದಿನ ರಾಜಕೀಯ ಬೆಳವಣಿಗೆಗಳತ್ತ ಎಲ್ಲರ ಚಿತ್ತ ನೆಟ್ಟಿದೆ. ಸದ್ಯಕ್ಕೆ ಮಾಜಿ ಸಚಿವರುಗಳು ತಮ್ಮ ಸರಕಾರಿ ಸೌಲಭ್ಯಗಳನ್ನು ಬಿಟ್ಟುಕೊಟ್ಟು ಸಾಮಾನ್ಯ ಶಾಸಕರಾಗಿ ತಮ್ಮ ಖಾಸಗಿ ನಿವಾಸ ಹಾಗೂ ವಾಹನಗಳ ಮೊರೆ ಹೋಗುತ್ತಿದ್ದಾರೆ.






