ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ರನ್ನು ವಿಚಾರಣೆ ನಡೆಸಲು ಐಟಿ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು 84 ಲಕ್ಷ ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ. ಇದೀಗ ಐಟಿ ಅಧಿಕಾರಿಗಳು ನಟ ದರ್ಶನ್ ಮನೆಯ ಮೇಲೆ ದಾಳಿ ಮಾಡಲು ಕೋರ್ಟಿಗೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ನಟ ದರ್ಶನ್ ಗೆ ಕೊಲೆ ಪ್ರಕರಣ ಸೇರಿ ಇದೀಗ ಐಟಿ ಸಂಕಷ್ಟ ಕೂಡ ಎದುರಾಗಿದೆ.
ರೇಣುಕಾಸ್ವಾಮಿ ಕೊಲೆ ಬಳಿಕ ಹಣದ ವಹಿವಾಟು ನಡೆದಿರುವ ಹಿನ್ನೆಲೆಯಲ್ಲಿ ನಾಳೆ ಅಥವಾ ನಾಡಿದ್ದು, ಬಳ್ಳಾರಿ ಜೈಲಿಗೆ ಐಟಿ ಅಧಿಕಾರಿಗಳು ಭೇಟಿ ನೀಡಲಿದ್ದು, ನಟ ದರ್ಶನ್ ವಿಚಾರಣೆ ನಡೆಸಲಿದ್ದಾರೆ. ಐಟಿ ಅಧಿಕಾರಿಗಳಿಗೆ ಸಹಕಾರ ನೀಡುವಂತೆ ಕೋರ್ಟ್ ನಿಂದ ಜೈಲಿನ ಅಧಿಕಾರಿಗಳಿಗೆ ಇ-ಮೇಲ್ ಕಳುಹಿಸಲಾಗಿದೆ. ನಟ ದರ್ಶನ್ ಮನೆಯಲ್ಲಿ ಅಷ್ಟು ಹಣ ಎಲ್ಲಿಂದ ಬಂತು? ಹೇಗೆ ಬಂತು? ಹಣದ ಮೂಲ ಪತ್ತೆಗೆ ಐಟಿ ಅಧಿಕಾರಿಗಳು ಮುಂದಾಗಿದ್ದಾರೆ.