ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಐಶ್ವರ್ಯ ಗೌಡ ಮಾದರಿ ವಂಚನೆ ನಡೆದಿದೆ. ಕಿಟ್ಟಿ ಪಾರ್ಟಿಯಲ್ಲಿ ಪರಿಚಯವಾದವರಿಗೆ ಕೋಟಿ ಕೋಟಿ ರೂಪಾಯಿ ವಂಚನೆ ಎಸಗಿದ್ದು, ಸುಮಾರು 20ಕ್ಕೂ ಹೆಚ್ಚು ಮಹಿಳೆಯರಿಗೆ 30ಕ್ಕೂ ಹೆಚ್ಚು ಕೋಟಿ ವಂಚನೆ ಎಸಗಲಾಗಿದೆ. ಕಿಟ್ಟಿ ಪಾರ್ಟಿಯಲ್ಲಿ ಹಣದ ಹಿನ್ನೆಲೆ ಇರುವ ಮಹಿಳೆಯರಿಗೆ ಗಾಳ ಹಾಕಲಾಗಿದ್ದು, ಸ್ನೇಹಿತೆಯರಿಗೆ ವಂಚನೆ ಮಾಡಿದ ಮಹಿಳೆಯನ್ನು ಸದ್ಯ ಪೋಲೀಸರು ಅರೆಸ್ಟ್ ಮಾಡಿದ್ದಾರೆ.
ಬಸವೇಶ್ವರನಗರ ಪೊಲೀಸರಿಂದ ಆರೋಪಿ ಸವಿತಾ ಎನ್ನುವ ಮಹಿಳೆಯನ್ನು ಬಂಧಿಸಲಾಗಿದೆ. ಕಿಟ್ಟಿ ಪಾರ್ಟಿಯಲ್ಲಿ ಸವಿತಾ ಮಹಿಳೆಯರನ್ನು ಪರಿಚಯ ಮಾಡಿಕೊಂಡಿದ್ದಳು. ಈ ವೇಳೆ ಮಹಿಳೆಯರ ಹಿನ್ನೆಲೆ ಬಗ್ಗೆ ಆರೋಪಿ ಸವಿತಾ ವಿಚಾರಿಸುತ್ತಿದ್ದಳು. ಬಳಿಕ ಬಗೆ ಬಗೆಯ ತಿಂಡಿ ಊಟ ಕೊಡಿಸಿ ನಂಬಿಕೆ ಬರಿಸುತ್ತಿದ್ದಳು. ಹಲವು ರಾಜಕಾರಣಿಗಳು ಪರಿಚಯ ಎಂದು ಹೇಳಿಕೊಳ್ಳುತ್ತಿದ್ದಳು. ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಸಚಿವ ಎಂ ಬಿ ಪಾಟೀಲ್ ಹೆಸರು ದುರ್ಬಳಕೆ ಮಾಡಿಕೊಂಡಿದ್ದು, ನಂತರ ನಿಧಾನವಾಗಿ ಹೂಡಿಕೆ ನೆಪದಲ್ಲಿ ಹಣ ಪಡೆದುಕೊಳ್ಳುತ್ತಿದ್ದಳು.
ಹಣ ಹೂಡಿಕೆ ಮಾಡಿದ ಮಹಿಳೆಯರಿಗೆ ಹಣ ಡಬಲ್ ಮಾಡಿ ಕೊಡುವುದಾಗಿ ಸವಿತಾ ಮಹಿಳೆಯರಿಗೆ ಆಮಿಷ ಒಡ್ಡುತ್ತಿದ್ದಳು. ಅಮೆರಿಕಾದಿಂದ ಕಡಿಮೆ ಬೆಲೆಗೆ ಚಿನ್ನ ತರಿಸಿಕೊಡುವುದಾಗಿ ವಂಚನೆ ಎಸಗಿದ್ದಾಳೆ. ಸಂಬಂಧಿಕರು ವಿದೇಶದಲ್ಲಿದ್ದಾರೆ ಎಂದು ವಂಚಕ್ಕೆ ಸವಿತಾ ಮಹಿಳೆಯರನ್ನು ನಂಬಿಸುತ್ತಿದ್ದಳು. ಹೀಗೆ 50 ಲಕ್ಷದಿಂದ ಎರಡೂವರೆ ಕೋಟಿ ಅವರಿಗೆ ಮಹಿಳೆಯರು ಹಣ ನೀಡಿದ್ದಾರೆ. ಇದೀಗ ಬಸವೇಶ್ವರ ಠಾಣೆ ಪೋಲೀಸರು ಆರೋಪ ಸವಿತಾಳನ್ನು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ.