ಬೆಂಗಳೂರು : ಇತ್ತೀಚಿಗೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವಡೆ ಬ್ಯಾಂಕ್ ಎಟಿಎಂ ಮನೆಗಳ್ಳತನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಬೆಂಗಳೂರಿನಲ್ಲಿ ಮತ್ತೊಂದು ದರೋಡೆಯಾಗಿದ್ದು ಕೇವಲ 20 ದಿನಗಳ ಹಿಂದೆ ಮನೆ ಕೆಲಸಕ್ಕೆ ಎಂದು ಸೇರಿದ ನೇಪಾಳ ಮೂಲದ ದಂಪತಿ ಮನೆಯಲ್ಲಿದ್ದ 18 ಕೋಟಿ ಮೌಲ್ಯದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದಾರೆ.
ಬೆಂಗಳೂರಿನ ಮಾರತಹಳ್ಳಿಯಲ್ಲಿರುವ ಉದ್ಯಮಿ ಶಿವಕುಮಾರ್ ಎಂಬುವರ ಮನೆಯಲ್ಲಿ ಜನವರಿ 25ರಂದು ಹಾಡಹಗಲೇ ಘಟನೆ ನಡೆದಿದೆ. ನೇಪಾಳ ಮೂಲದ ದಿನೇಶ್ (32) ಹಾಗೂ ಕಮಲಾ (25) ಎಂಬ ದಂಪತಿ ಕೃತ್ಯವೆಸಗಿ ಪರಾರಿಯಾಗಿರುವ ಆರೋಪಿಗಳು ಎಂದು ತಿಳಿದುಬಂದಿದೆ.
ಶಿವಕುಮಾರ್ ಅವರ ಮನೆಯ ಹೌಸ್ ಕೀಪಿಂಗ್ ಹಾಗೂ ಸಣ್ಣಪುಟ್ಟ ಕೆಲಸಗಳಿಗಾಗಿ ದಿನೇಶ್ ಹಾಗೂ ಕಮಲಾ ದಂಪತಿಯನ್ನು ಕೇವಲ 20 ದಿನಗಳ ಹಿಂದಷ್ಟೆ ಸೇರಿಸಿಕೊಳ್ಳಲಾಗಿತ್ತು. ಜನವರಿ 25ರಂದು ಸಂಬಂಧಿಕರೊಬ್ಬರ ಮನೆಯಲ್ಲಿ ಭೂಮಿ ಪೂಜೆ ಇದ್ದುದರಿಂದ ಶಿವಕುಮಾರ್ ಅವರ ಕುಟುಂಬ ಬೆಳಗ್ಗೆಯೇ ಹೆಚ್.ಕ್ರಾಸ್‌ಗೆ ತೆರಳಿತ್ತು.
ಆ ಸಂದರ್ಭ ಬಳಸಿಕೊಂಡ ಆರೋಪಿಗಳು ನೆಲಮಹಡಿ, ಮೊದಲ ಮಹಡಿಯಲ್ಲಿದ್ದ ಬೆಡ್ ರೂಮ್ ಲಾಕರ್ ಮುರಿದು 11.5 ಕೆ.ಜಿ ಚಿನ್ನ ಹಾಗೂ ವಜ್ರಾಭರಣಗಳು, 5 ಕೆ.ಜಿ ಬೆಳ್ಳಿ, 11.5 ಲಕ್ಷ ರೂಪಾಯಿ ನಗದು ಎಗರಿಸಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಶಿವಕುಮಾರ್ ಅವರ ಪುತ್ರ ಶೀಮಂತ್ ಎಸ್. ಅರ್ಜುನ್ ಅವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ತಲಾಶ್ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.








