ಬೆಂಗಳೂರು : ವಿಧಾನಸಭೆಯಲ್ಲಿ ವಿಪಕ್ಷಗಳ ಸಭಾತ್ಯಾಗದ ನಡುವೆ ವಿಬಿ-ಜಿ ರಾಮ್ ಜಿ ಬಿಲ್ ವಿರೋಧಿಸಿ ನಿರ್ಣಯವನ್ನು ಸರ್ಕಾರ ಪಾಸ್ ಮಾಡಿಕೊಂಡಿದೆ. ಜಿ ರಾಮ ಜಿ ಕಾಯ್ದೆ ವಿರುದ್ಧ ನಿರ್ಣಯವನ್ನು ಸಿಎಂ ಸಿದ್ದರಾಮಯ್ಯ ಮಂಡಿಸಿದರು. ಸಿಎಂ ಸಿದ್ದರಾಮಯ್ಯ ಮಂಡಿಸಿದ್ದ ನಿರ್ಣಯವನ್ನು ಸ್ಪೀಕರ್ ಯುಟಿ ಖಾದರ್ ಮತಕ್ಕೆ ಹಾಕಿದ್ದರು. ನಿರ್ಣಯ ಅಂಗೀಕರವಾಗಿದೆ ಎಂದು ಸ್ಪೀಕರ್ ಯುಟಿ ಖಾದರ್ ಪ್ರಕಟಿಸಿದರು. ಬಳಿಕ ಅನಿರ್ದಿಷ್ಟವಧಿಗೆ ವಿಧಾನಸಭೆ ಕಲಾಪ ಮುಂದೂಡಲಾಯಿತು.
ಸಚಿವ ಪ್ರಿಯಾಂಕ್ ಖರ್ಗೆ ಮಾತಾಡಿ, ಅಡ್ವಾಣಿಯವರೇ ನರೇಗಾ ಯೋಜನೆಯನ್ನ ಹೊಗಳಿದ್ದರು. ಕಾರ್ಮಿಕರ ಬದುಕಿನ ಬಗ್ಗೆ ವರುಣ್ ಗಾಂಧಿ ಲೋಕಸಭೆಯಲ್ಲಿ ಪ್ರಶ್ನೆ ಮಾಡಿದ್ದಾಗ, ನರೇಗಾ ಪಾರದರ್ಶಕವಾಗಿದೆ ಅಂತ ಕೇಂದ್ರ ಸರ್ಕಾರವೇ ಉತ್ತರ ಕೊಟ್ಟಿತ್ತು. ವಿಬಿ ಜಿ ರಾಮ್ ಜಿ ಕಾಯ್ದೆ ಒಕ್ಕೂಟ ವಿರೋಧಿ, ಸಂವಿಧಾನ ವಿರೋಧಿ. ರಾಜ್ಯಗಳ ಮೇಲೆ ಆರ್ಥಿಕ ಹೊರೆ ಹೊರೆಸುವ ಸಂಚಿನ ಕಾಯ್ದೆ ಅಂದರು. ನಿರ್ಣಯ ಅಂಗೀಕಾರಕ್ಕೆ ಮನವಿ ಮಾಡಿದರು. ಆದರೆ, ಪ್ರಿಯಾಂಕ್ ಖರ್ಗೆ ಸುಳ್ಳು ಹೇಳ್ತಿದ್ದಾರೆ ಅಂತ ಆರಗ ಜ್ಞಾನೇಂದ್ರ ಆಕ್ಷೇಪಿಸಿದರು.
ಅಶೋಕ್ ಸಿಡಿದೆದ್ದು, ನರೇಗಾ ಲೂಟಿ ತಪ್ಪಿಸಲು ವಿಬಿ ಜಿ ರಾಮ್ ಜಿ ತರಲಾಗಿದೆ. ಸರ್ಕಾರದ ನಿರ್ಣಯಕ್ಕೆ ನಮ್ಮ ವಿರೋಧ ಇದೆ. ನಿರ್ಣಯ ವಿರೋಧಿಸಿ ಸಭಾತ್ಯಾಗ ಮಾಡ್ತೇವೆ ಅಂತ ಸರ್ಕಾರದ ನಿರ್ಣಯ ಪ್ರತಿ ಹರಿದು ಹಾಕಿ ಹೊರನಡೆದರು. ಗದ್ದಲದ ನಡುವೆ ಡಿಸಿಎಂ ಡಿಕೆಶಿ ಮಾತಾಡಿ, ವಿಬಿ ಜಿ ರಾಮ್ ಜಿ ಜಾರಿ ಮಾಡಲು ಅಸಾಧ್ಯ ಆಗಿರೋ ಕಾಯ್ದೆ. ಮನ್ರೇಗಾ ಮರು ಜಾರಿ ಆಗಬೇಕು ಅಂದರು.








