ದಾವಣಗೆರೆ : ದೇಶದ ಹಿರಿಯ ರಾಜಕಾರಣಿ, ದಾವಣಗೆರೆ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ (95) ಇಂದು ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದಾಗಿ ಬಳಲುತ್ತಿದ್ದ ಅವರು, ಕುಟುಂಬಸ್ಥರು, ಅಪಾರ ಬೆಂಬಲಿಗರು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. ಇದೀಗ ದಾವಣಗೆರೆಯ ಕಲ್ಲೇಶ್ವರ ಮಿಲ್ ನಲ್ಲಿ ಸಕಲ ಸರ್ಕಾರಿ ಗೌರವ ಹಾಗು ವೀರಶೈವ ಲಿಂಗಾಯತ ಸಂಪ್ರದಾಯದಂತೆ ಶಾಮನೂರು ಶಿವಶಂಕರಪ್ಪನವರ ಅಂತ್ಯಕ್ರಿಯೆ ನೆರವೇರಿತು.
ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆ ನಗರದ ಕಲ್ಲೇಶ್ವರ ಮಿಲ್ ನಲ್ಲಿ ಅಂತ್ಯ ಸಂಸ್ಕಾರ ನೆರವೇರಿತು. ಪತ್ನಿ ಸಮಾಧಿಯ ಪಕ್ಕದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆ ನೆರವೇರಿತು. ವೀರಶೈವ ಲಿಂಗಾಯತ ವಿಧಿ ವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನೆರವೇರಿತು ಪಂಚಪೀಠಾಧಿಶ್ವರರ ಪಾದೋಧಕ ಮೂಲಕ ಪೂಜೆ ಮಾಡಿ, ಕ್ರಿಯಾ ಸಮಾಧಿ ಬಳಿಕ ಶಿವಶಂಕರಪ್ಪ ಪಾರ್ಥಿವ ಶರೀರಕ್ಕೆ ಅಭಿಷೇಕ ಮಾಡಲಾಯಿತು. ಮಣ್ಣು ಹಾಕದೆ ಕ್ರಿಯಾ ಸಮಾಧಿಯಲ್ಲಿ ವಿಭೂತಿ ಹಾಕಲಾಯಿತು.
ಇದೆ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ನೂರಕ್ಕೂ ಹೆಚ್ಚು ವಿವಿಐಪಿಗಳು ಅಂತಿಮ ದರ್ಶನ ಪಡೆದರು. ಒಂದು ನೂರಕ್ಕೂ ಹೆಚ್ಚು ಪಂಚಪೀಠ ಮತ್ತು ವಿರಕ್ತಮಠಗಳ ಸ್ವಾಮೀಜಿಗಳು ಸಹ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಅಕ್ಕಿ ವ್ಯಾಪಾರ ಮಾಡುತ್ತಾ ರಾಜಕೀಯಕ್ಕೆ ಎಂಟ್ರಿ
ಶಾಮನೂರು ಶಿವಶಂಕರಪ್ಪ ಅವರು ಶಾಮನೂರು ಕಲ್ಲಪ್ಪ ಹಾಗೂ ಶಾಮನೂರು ಸಾವಿತ್ರಮ್ಮ ದಂಪತಿಯ ಪುತ್ರನಾಗಿ ಜೂನ್ 16, 1931ರಲ್ಲಿ ದಾವಣಗೆರೆಯ ಶಾಮನೂರು ಗ್ರಾಮದಲ್ಲಿ ಜನಿಸಿದರು. ಪಾರ್ವತಮ್ಮ ಅವರನ್ನು ವಿವಾಹವಾದರು. ಇವರಿಗೆ ಡಾ.ಮಂಜುಳಾ ಶಿವಶಂಕರ್, ಸುಧಾ ಪಾಟೀಲ್, ಡಾ.ಶೈಲಜಾ ಭಟ್ಟಾಚಾರ್ಯ, ಮೀನಾ ಡಾ.ಶರಣಪ್ಪ ಪಾಟೀಲ್ ಎಂಬ ನಾಲ್ವರು ಪುತ್ರಿಯರು ಮತ್ತು ಎಸ್.ಎಸ್.ಬಕ್ಕೇಶ್, ಎಸ್.ಎಸ್.ಗಣೇಶ್ ಹಾಗೂ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸೇರಿದಂತೆ ಮೂವರು ಪುತ್ರರಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಪಡೆದ ಅವರು, ಡಿಆರ್ಎಂ ಸೈನ್ಸ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದಿದ್ದಾರೆ. ಅಕ್ಕಿ ವ್ಯಾಪಾರ ಮಾಡುತ್ತಾ ರಾಜಕೀಯಕ್ಕೆ ಪ್ರವೇಶ ಮಾಡಿದ್ದರು. ಮೊಟ್ಟ ಮೊದಲ ಬಾರಿಗೆ ಈ ಹಿಂದೆ ಚಿತ್ರದುರ್ಗ ಜಿಲ್ಲೆಯ ಭಾಗವಾಗಿದ್ದ ದಾವಣಗೆರೆ ನಗರಸಭೆ ಸದಸ್ಯರಾಗಿ, ಬಳಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಕಾಂಗ್ರೆಸ್ನಲ್ಲಿ ಹಲವು ದಶಕಗಳ ಕಾಲ ರಾಜಕಾರಣ ಮಾಡಿರುವ ಶಾಮನೂರು, ಜಿಲ್ಲೆಯಷ್ಟೇ ಅಲ್ಲದೇ ರಾಜ್ಯ, ದೇಶದಲ್ಲೇ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು.
ರಾಜಕೀಯದಲ್ಲಿ ನಡೆದು ಬಂದ ಹಾದಿ
1969ರಲ್ಲಿ ದಾವಣಗೆರೆ ಮುನ್ಸಿಪಲ್ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದರು. 1971ರಿಂದ 1973ರ ವರೆಗೆ ಅವಿಭಜಿತ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 1980ರಲ್ಲಿ ಲೋಕಸಭಾ ಚುನಾವಣೆಗೆ ಅರಸು ಕಾಂಗ್ರೆಸ್ನ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಇಂದಿರಾ ಗಾಂಧಿ ಕಾಂಗ್ರೆಸ್ನ ಅಭ್ಯರ್ಥಿ ಟಿ.ವಿ.ಚಂದ್ರಶೇಖರಪ್ಪರ ವಿರುದ್ಧ ಪರಾಭವಗೊಂಡರು. 1994ರಲ್ಲಿ ನಡೆದ 10ನೇ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಬಿ. ಶಂಕರನಾರಾಯಣ ಅವರನ್ನು ಮಣಿಸಿದ ಶಾಮನೂರು ಶಿವಶಂಕರಪ್ಪ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 1997ರಲ್ಲಿ ಲೋಕಸಭಾ ಚುನಾವಣೆಗೆ ಸ್ಫರ್ಧಿಸಿದ ಶಿವಶಂಕರಪ್ಪ, ಬಿಜೆಪಿ ಅಭ್ಯರ್ಥಿ ಜಿ.ಮಲ್ಲಿಕಾರ್ಜುನಪ್ಪರನ್ನು ಸೋಲಿಸಿ ಸಂಸದರಾದರು.
2004ರಲ್ಲಿ ಶಿವಶಂಕರಪ್ಪ 2ನೇ ಬಾರಿ ಶಾಸಕರಾಗಿ ಆಯ್ಕೆ, 2008ರಲ್ಲಿ ಮೂರನೇ ಬಾರಿ, 2013ರಲ್ಲಿ ನಾಲ್ಕನೇ ಬಾರಿ, 2018ರಲ್ಲಿ ಐದನೇ ಬಾರಿ ಹಾಗೂ 2023ರಲ್ಲಿ ಆರನೇ ಬಾರಿ ಶಾಸಕರಾಗಿ ಚುನಾಯಿತರಾದರು. 2013ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಸಂಪುಟದಲ್ಲಿ ಎರಡೂವರೆ ವರ್ಷಗಳ ಕಾಲ ತೋಟಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 1997ರಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. 1999ರಲ್ಲಿ ಮತ್ತೆ ಲೋಕಸಭಾ ಚುನಾನಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಒಂದು ಮತದಿಂದ ಸೋಲು ಕಂಡ ಸಂದರ್ಭ ಇದಾಗಿತ್ತು.
95ನೇ ವಸಂತಕ್ಕೆ ಕಾಲಿಟ್ಟ ಶಾಮನೂರು ಶಿವಶಂಕರಪ್ಪನವರು 35ನೇ ವಯಸ್ಸಿನಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ್ದರು. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ್ದು ಅವರು ವಾನಪ್ರಸ್ಥ ಅವಧಿಯಲ್ಲಿ. ಇದು ಇತಿಹಾಸವಾದರೂ ಇಂದಿಗೂ ಅವರ ರಾಜಕೀಯ ಉತ್ಸಾಹಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಜಿಲ್ಲೆಯಲ್ಲಿ ಬಾಪೂಜಿ ವಿದ್ಯಾಸಂಸ್ಥೆಯಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದರು. ಮೆಡಿಕಲ್ ಕಾಲೇಜುಗಳು, ಶಾಲೆ ಪಿಯು ಕಾಲೇಜು, ಕಾನೂನು ಕಾಲೇಜು, ವಸತಿಯುತ ಶಾಲೆಗಳು, ಡೆಂಟಲ್ ಕಾಲೇಜುಗಳನ್ನು ತೆರೆದ ಕೀರ್ತಿ ಶಾಮನೂರು ಅವರಿಗೆ ಸಲ್ಲುತ್ತದೆ.








