ಹಾಸನ : ಕಳೆದ ಕೆಲವು ದಿನಗಳ ಹಿಂದೆ ಅಷ್ಟೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ್ದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಹಾಸನದಲ್ಲಿ ಮತ್ತೊಂದು ಘೋರ ದುರಂತ ಒಂದು ಸಂಭವಿಸಿದ್ದು, ಹಾಸನ ತಾಲೂಕಿನ ಮೊಸಳೆ ಹೊಸಹಳ್ಳಿ ಬಳಿ ಗಣೇಶ ವಿಸರ್ಜನಾ ಮೆರವಣಿಗೆಗೆ ವೇಳೆ ಟ್ರಕ್ ಹರಿದು ಭೀಕರ ಅಪಘಾತ ಸಂಭವಿಸಿದೆ. ದುರಂತದಲ್ಲಿ 9 ಜನರು ಸಾವನ್ನಪ್ಪಿದ್ದಾರೆ.
ಹಾಸನದಿಂದ ಹೊಳೆನರಸಿಪುರ ಮಾರ್ಗವಾಗಿ ಹೋಗುತ್ತಿದ್ದ ಮಿನಿ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಗಣೇಶ ವಿಸರ್ಜನೆ ನಡೆಯುತ್ತಿದ್ದ ಮೆರವಣಿಗೆಗೆ ನುಗ್ಗಿದೆ. ಜನರ ಮೇಲೆ ವಾಹನ ಹರಿದ ಪರಿಣಾಮ ಭಾರೀ 6 ವಿದ್ಯಾರ್ಥಿಗಳು ಸೇರಿ 9 ಜನರು ಸಾವನ್ನಪ್ಪಿದ್ದರೆ. 20 ಜನರಿಗೆ ಗಂಭೀರವಾಗಿ ಗಾಯಗಳಾಗಿದ್ದು, 7 ಜನರಿಗೆ ICU ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದ್ದಾರೆ.
ಮೃತರನ್ನು ಬಳ್ಳಾರಿ ಮೂಲದ ಇಂಜಿನಿಯರ್ ವಿದ್ಯಾರ್ಥಿ ಪ್ರವೀಣ್ ಕುಮಾರ್, ಹೊಳೆನರಸೀಪುರ ತಾಲೂಕಿನ ಕೆ.ಬಿ ಪಾಳ್ಯದ ರಾಜೇಶ್ ರಣಾಯಕನಹಳ್ಳಿ, ಕೊಪ್ಪಲು ಗ್ರಾಮದ ಈಶ್ವರ್ (17) ಮುತ್ತಿಗೆ ಹಿರೇಹಳ್ಳಿಯ ಗೋಕುಲ್ (17) ಹಾಗೂ ಕಬ್ಬಿನಹಳ್ಳಿ ಗ್ರಾಮದ ಕುಮಾರ್ ಹಾಗೂ ಪ್ರವೀಣ್. ಚಿತ್ರದುರ್ಗ ಜಿಲ್ಲೆಯ ಗಂಗಾಪುರದ ಮಿಥುನ್ (23) ಚಿಕ್ಕಮಂಗಳೂರು ಜಿಲ್ಲೆಯ ಮಾಣಯ್ಯನ ಹಳ್ಳಿಯ ಸುರೇಶ್ (19) ಹಾಸನ ಜಿಲ್ಲೆಯ ಬಂಟರ ಹಳ್ಳಿಯ ಪ್ರಭಾಕರ್ (55) ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಮೊಸಳೆ ಹೊಸಹಳ್ಳಿ, ಹಿರೇಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು ಎನ್ನಲಾಗಿದೆ. ಏಕಾಏಕಿ ಕ್ಯಾಂಟರ್ ಮೆರವಣಿಗೆಯ ಮೇಲೆ ನುಗ್ಗಿದ ಪರಿಣಾಮ ಈ ಘಟನೆ ಸಂಭವಿಸಿದ್ದು ಸದ್ಯ ಮೃತರನ್ನ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಗಂಭೀರ ಗಾಯಗಳಾಗಿರುವ ವ್ಯಕ್ತಿಗಳನ್ನ ಹಾಸನ ಮತ್ತು ಹೊಳೆನರಸೀಪುರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.