ಮೈಸೂರು : ಮೈಸೂರಿನಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮರಣೋತ್ತರ ಪರೀಕ್ಷೆಯಲ್ಲಿ ಸ್ಪೋಟಕವಾದ ಅಂಶ ಬಯಲಾಗಿದ್ದು, ಆರೋಪಿ ಕಾರ್ತಿಕ್ ಬಾಲಕಿಗೆ 19 ಬಾರಿ ಚಾಕು ಇರಿದು ಕೊಲೆ ಮಾಡಿದ್ದಾನೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಹೌದು ಬಾಲಕಿಯ ಮರಣೋತ್ತರ ಪರೀಕ್ಷೆಯಲ್ಲಿ ಇದು ದೃಢವಾಗಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಬಳಿಕ ಆರೋಪಿ ಕಾರ್ತಿಕ್ 19 ಬಾರಿ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ. ಮದ್ಯದ ನಶೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ಆರೋಪಿ ಮದ್ಯ ಕುಡಿದಿದ್ದು ಸಹ ವೈದ್ಯಕೀಯ ಪರೀಕ್ಷೆಯಲ್ಲಿ ದೃಢವಾಗಿದೆ.
ಪ್ರಕರಣ ಹಿನ್ನೆಲೆ?
ದಸರಾ ಸಂದರ್ಭದಲ್ಲಿ ಬೀದಿ ಬದಿಯಲ್ಲಿ ಬಲೂನು, ಇತರ ವಸ್ತುಗಳನ್ನು ಮಾರಲು ಬಂದಿದ್ದ 9 ವರ್ಷದ ಬಾಲಕಿಯ ಶವ ನಗರದ ಕುಸ್ತಿ ಅಖಾಡದ ಮುಂಭಾಗದ ಮೈದಾನದಲ್ಲಿ ದೊರೆತಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆಯಡಿ ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಸರಾ ಸಂದರ್ಭದಲ್ಲಿ ಬಲೂನು ಮಾರಲು 500ಕ್ಕೂ ಹೆಚ್ಚು ಜನರಿದ್ದ ಸುಮಾರು 50 ಕುಟುಂಬಗಳು ಕಲಬುರಗಿ ಜಿಲ್ಲೆಯಿಂದ ಮೈಸೂರಿಗೆ ಬಂದಿವೆ. ಹೀಗೆ ಬಂದವರು ದಸರಾ ವಸ್ತು ಪ್ರದರ್ಶನದ ಪಕ್ಕದ ಕುಸ್ತಿ ಅಖಾಡದ ಮುಂಭಾಗದಲ್ಲಿರುವ ಇಟ್ಟಿಗೆ ಗೂಡಿನ ಮೈದಾನದಲ್ಲಿ ಶೆಡ್ ಹಾಕಿಕೊಂಡು ವಾಸ್ತವ್ಯ ಹೂಡಿದ್ದರು.
ಮಗಳು ಎಂದಿನಂತೆ ಅವಳ ಅಜ್ಜಿಯ ಜೊತೆ ಮಲಗಿದ್ದಳು. ಬೆಳಗಿನಜಾವ ಮಳೆ ಬಂದಿದ್ದರಿಂದ ಜೋಪಡಿಗೆ ಟಾರ್ಪಲ್ ಹಾಕುವ ಸಲುವಾಗಿ ನಾನು ಮತ್ತು ನನ್ನ ಗಂಡ ಇಬ್ಬರು ಎದ್ದೆವು. ಆಗ ಮಗಳು ಕಾಣಿಸಲಿಲ್ಲ. ತಕ್ಷಣ ಅಕ್ಕ-ಪಕ್ಕದ ಜೋಪಡಿಗಳಲ್ಲಿ ಹುಡುಕಾಡಿದರೂ ಸಹ ಅವಳು ಕಂಡುಬರಲಿಲ್ಲ. ಆಗ ಅಲ್ಲೇ ಪಕ್ಕದ ಜಾಗವೊಂದರಲ್ಲಿ ಮಗಳ ಚೂಡಿದಾರದ ಪ್ಯಾಂಟ್, ಇತರ ಬಟ್ಟೆ ಸಿಕ್ಕಿತು. ಸುತ್ತಮುತ್ತ ಹುಡುಕಾಡಿದಾಗ ಹತ್ತಿರದಲ್ಲಿದ್ದ ಒಂದು ಗುಂಡಿಯಲ್ಲಿ ಮಗಳು ಕಂಡುಬಂದಳು.
ಅವಳ ಮೈಮೇಲೆ ಚೂಡಿದಾರದ ಟಾಪ್ ಬಟ್ಟೆ ಮಾತ್ರ ಇತ್ತು. ಅವಳನ್ನು ಎತ್ತಿಹಿಡಿದು ಮಾತನಾಡಿಸಲು ಯತ್ನಿಸಿದಾಗ ಆಕೆ ಮಾತನಾಡಲಿಲ್ಲ. ಅವಳ ತಲೆಯ ಎಡಭಾಗಕ್ಕೆ ಗಾಯಗಳಾಗಿ ರಕ್ತ ಬಂದಿದ್ದು, ಎಡಭಾಗದ ಕೆನ್ನೆ, ಕತ್ತು ಸೇರಿದಂತೆ ಇತರೆಡೆ ಗಾಯವಾಗಿತ್ತು. ಯಾರೋ ರಾತ್ರಿ ಮಗಳನ್ನು ಕಿಡ್ನಾಪ್ ಮಾಡಿ, ರೇಪ್ ಮಾಡಿ, ಕೊಲೆ ಮಾಡಿದ್ದಾರೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಬಾಲಕಿಯ ತಾಯಿ ಆಗ್ರಹಿಸಿದ್ದಾರೆ.