ಕ್ವೆಟ್ಟಾ: ಕಳೆದ ವಾರ ನಡೆದ ಭೀಕರ ರೈಲು ಬಾಂಬ್ ಸ್ಫೋಟಕ್ಕೆ ಪ್ರತಿಯಾಗಿ ಪಾಕಿಸ್ತಾನದ ಭದ್ರತಾ ಪಡೆಗಳು ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಭಾರಿ ಕಾರ್ಯಾಚರಣೆ ನಡೆಸಿದ್ದು, ನಿಷೇಧಿತ ‘ಬಲೂಚ್ ಲಿಬರೇಷನ್ ಆರ್ಮಿ’ (BLA) ಸಂಘಟನೆಯ ಕನಿಷ್ಠ 17 ಉಗ್ರರನ್ನು ಹೊಡೆದುರುಳಿಸಿದ್ದಾರೆ ಎಂದು ಸೇನೆ ಮಂಗಳವಾರ ತಿಳಿಸಿದೆ.
ಮೇ 24 ರಂದು ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದ ಮಿಲಿಟರಿ ವಲಯದ ಶಟಲ್ ರೈಲೊಂದರಲ್ಲಿ ಉಗ್ರರು ನಡೆಸಿದ ಭೀಕರ ಬಾಂಬ್ ದಾಳಿಯಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದರು. ಈ ದಾಳಿಯ ಹೊಣೆಯನ್ನು ನಿಷೇಧಿತ ಉಗ್ರಗಾಮಿ ಸಂಘಟನೆಯಾದ ಬಿಎಲ್‌ಎ (BLA) ಹೊತ್ತುಕೊಂಡಿತ್ತು.
ರೈಲು ಸ್ಫೋಟದ ಬೆನ್ನಲ್ಲೇ ಎಚ್ಚೆತ್ತುಕೊಂಡ ಭದ್ರತಾ ಪಡೆಗಳು, ಖಚಿತ ಮಾಹಿತಿ ಆಧರಿಸಿ ಬಲೂಚಿಸ್ತಾನದ ಮಸ್ತುಂಗ್, ನುಷ್ಕಿ, ಜೆಹ್ರಿ, ಖುಜ್ದಾರ್ ಮತ್ತು ಕೇಚ್ ಜಿಲ್ಲೆಗಳಲ್ಲಿ ಸರಣಿ ಜಂಟಿ ಕಾರ್ಯಾಚರಣೆಗಳನ್ನು ಕೈಗೊಂಡಿದ್ದವು.
ಕಾರ್ಯಾಚರಣೆಯ ಸಂದರ್ಭದಲ್ಲಿ ಭದ್ರತಾ ಪಡೆಗಳು ಉಗ್ರರ ಅಡಗುತಾಣಗಳನ್ನು ಯಶಸ್ವಿಯಾಗಿ ಸುತ್ತುವರಿದು ದಾಳಿ ನಡೆಸಿವೆ. ಈ ವೇಳೆ ಉಗ್ರರು ಮತ್ತು ಸೇನೆಯ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದ್ದು, ಬಿಎಲ್‌ಎ ಸಂಘಟನೆಗೆ ಸೇರಿದ 17 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಈ ಮೂಲಕ ಆ ಭಾಗದಲ್ಲಿ ಸಕ್ರಿಯವಾಗಿದ್ದ ಉಗ್ರರ ಜಾಲಕ್ಕೆ ಭಾರಿ ಪೆಟ್ಟು ನೀಡಲಾಗಿದೆ” ಎಂದು ಸೇನೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.








