ಬೆಂಗಳೂರು: ಅಂತರ ರಾಜ್ಯ ಜಲ ವಿವಾದದ ಸಂಬಂಧಿಸಿದಂತೆ ಕಿರಿಕ್ ತೆಗೆದಂತ ಗೋವಾ ಮುಖ್ಯಮಂತ್ರಿಗೆ, ಸಿಎಂ ಬಸವರಾಜ ಬೊಮ್ಮಾಯಿ ಇಂದು ಖಡಕ್ ತಿರುಗೇಟು ನೀಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಗೋವಾ ಮುಖ್ಯಮಂತ್ರಿಗಳಿಂದ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಈ ದೇಶ ಕಾನೂನಿನಿಂದ ನಡೆಯುತ್ತಿದೆ. ಅಂತರ ರಾಜ್ಯ ಜಲ ವಿವಾದ ಕಾಯ್ದೆ ಇದೆ. ಸುಪ್ರೀಂಕೋರ್ಟ್ ಇದೆ, ನ್ಯಾಯ ಮಂಡಳಿಯಿದೆ. ಈ ಪ್ರಕರಣದಲ್ಲಿ ನ್ಯಾಯ ಮಂಡಳಿ ನಿರ್ಧಾರವನ್ನು ತಿಳಿಸಿದೆ. ನರೇಂದ್ರ ಮೋದಿಯವರ ಸರ್ಕಾರ 2018 ರಲ್ಲಿಯೇ ಅಧಿಸೂಚನೆ ಹೊರಡಿಸಿದೆ. ಈಗ ಡಿಪಿಆರ್ ಅನುಮೋಡಿಸಿದ್ದಾರೆ. ಇದೆಲ್ಲವೂ ಕಾನೂನು ಬದ್ಧವಾಗಿದೆ ಎಂದರು.
ಕರ್ನಾಟಕ ಏನೇ ಮಾಡಿದರೂ ಕಾನೂನು ಬದ್ಧವಾಗಿ ಮಾಡುತ್ತೇವೆ. ಡಿಪಿಆರ್ ಅನುಮೋದನೆಯ ಮೂಲಕ ಮುಂದಿನ ಕೆಲಸಕ್ಕೆ ಹಸಿರು ನಿಶಾನೆ ತೋರಿದ್ದಾರೆ. ಕಾನೂನು ಬದ್ಧವಾಗಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ನ್ಯಾಯಮಂಡಲಿಯು ನಮ್ಮ ಹಾಗೂ ಗೋವಾ ಬೇಡಿಕೆಯನ್ನು ಆಲಿಸಿದೆ. ಯಾರಿಗೂ ಧಕ್ಕೆಯಾಗದಂತೆ ನ್ಯಾಯಮಂಡಲಿ ತೀರ್ಪು ನೀಡಿದೆ. ಈ ದೇಶದ ಕಾನೂನನ್ನು ಎಲ್ಲರೂ ಗೌರವಿಸಬೇಕು ಎಂದರು.