ಬೆಂಗಳೂರು: ರಾಜಧಾನಿ ಬೆಂಗಳೂರಿನ ವಿವಿಧ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (RTO) ಬಾಂಬ್ ಇಟ್ಟು ಸ್ಫೋಟಿಸುವುದಾಗಿ ದುಷ್ಕರ್ಮಿಗಳು ಇ-ಮೇಲ್ ಮೂಲಕ ಬೆದರಿಕೆ ಹಾಕಿರುವ ಆಘಾತಕಾರಿ ಘಟನೆ ನಡೆದಿದೆ.
ನಗರದ ಕಸ್ತೂರಿನಗರ, ಜ್ಞಾನಭಾರತಿ, ತಲಘಟ್ಟಪುರ ಹಾಗೂ ಹೆಚ್.ಎಸ್.ಆರ್ ಲೇಔಟ್ ಸೇರಿದಂತೆ ಹಲವು ಪ್ರಮುಖ ಆರ್‌ಟಿಒ ಕಚೇರಿಗಳಿಗೆ ಈ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಇಂದು ಮಧ್ಯಾಹ್ನ ಸುಮಾರು 1:30ರ ಸುಮಾರಿಗೆ ದುಷ್ಕರ್ಮಿಗಳು ಈ ಇ-ಮೇಲ್ ಕಳುಹಿಸಿದ್ದು, ಕಚೇರಿಗಳನ್ನು ಸ್ಫೋಟಿಸುವುದಾಗಿ ಎಚ್ಚರಿಸಿದ್ದರು. ಬೆದರಿಕೆ ಸಂದೇಶ ತಿಳಿಯುತ್ತಿದ್ದಂತೆಯೇ ಆರ್‌ಟಿಒ ಕಚೇರಿಗಳಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸ್ಥಳಕ್ಕೆ ಪೊಲೀಸರ ದೌಡು, ತೀವ್ರ ಪರಿಶೀಲನೆ:
ವಿಷಯ ತಿಳಿಯುತ್ತಿದ್ದಂತೆಯೇ ತಕ್ಷಣ ಎಚ್ಚೆತ್ತ ಸ್ಥಳೀಯ ಪೊಲೀಸರು ಮತ್ತು ಶ್ವಾನದಳ ಹಾಗೂ ಬಾಂಬ್ ಪತ್ತೆ ದಳದ ಸಿಬ್ಬಂದಿ ಆಯಾ ಆರ್‌ಟಿಒ ಕಚೇರಿಗಳಿಗೆ ಧಾವಿಸಿದರು. ಮುಂಜಾಗ್ರತಾ ಕ್ರಮವಾಗಿ ಕಚೇರಿಯಲ್ಲಿದ್ದ ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿ, ಕಚೇರಿಯ ಮೂಲೆ ಮೂಲೆಗಳಲ್ಲೂ ತೀವ್ರ ಶೋಧ ಕಾರ್ಯ ನಡೆಸಿದರು.
ಹುಸಿಯಾದ ಬಾಂಬ್ ಕರೆ:
ಪೊಲೀಸರು ನಡೆಸಿದ ಸುದೀರ್ಘ ಹಾಗೂ ಸರಣಿ ಪರಿಶೀಲನೆಯ ನಂತರ ಯಾವುದೇ ಕಚೇರಿಯಲ್ಲೂ ಯಾವುದೇ ಅನುಮಾನಾಸ್ಪದ ವಸ್ತು ಅಥವಾ ಬಾಂಬ್ ಪತ್ತೆಯಾಗಿಲ್ಲ. ಹೀಗಾಗಿ ಇದು ಸಾರ್ವಜನಿಕರಲ್ಲಿ ಗೊಂದಲ ಹಾಗೂ ಆತಂಕ ಸೃಷ್ಟಿಸಲು ದುಷ್ಕರ್ಮಿಗಳು ಮಾಡಿದ ಹುಸಿ ಬಾಂಬ್ ಬೆದರಿಕೆ ಕರೆ (ಇ-ಮೇಲ್) ಎಂಬುದು ಸ್ಪಷ್ಟವಾಗಿದೆ. ತನಿಖೆಯ ನಂತರ ಪೊಲೀಸರು ಹಾಗೂ ಸಾರ್ವಜನಿಕರು ನಿರಾಳರಾಗಿದ್ದಾರೆ.
ಪ್ರಸ್ತುತ ಇ-ಮೇಲ್ ಬಂದ ಮೂಲದ ಬಗ್ಗೆ ಸೈಬರ್ ಕ್ರೈಂ ಮತ್ತು ಸ್ಥಳೀಯ ಪೊಲೀಸರು ಜಂಟಿಯಾಗಿ ತನಿಖೆ ಆರಂಭಿಸಿದ್ದು, ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಿದ್ದಾರೆ.








