ಬೆಂಗಳೂರು : ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಸಿಹಿ ಸುದ್ದಿ ಒಂದನ್ನು ನೀಡಿದ್ದು, ಇಂದಿನಿಂದ ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ನಿಂದ ನೇರಳೆ ಮಾರ್ಗದಲ್ಲಿ ಹೆಚ್ಚುವರಿ ರೈಲು ಸೇವೆ ಆರಂಭಿಸಲಾಗುತ್ತಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಹೌದು ಇಂದಿನಿಂದ ಪ್ರಯಾಣಿಕರ ಒತ್ತಾಯದ ಮೇರೆಗೆ ಹೆಚ್ಚುವರಿ ಮೆಟ್ರೋ ರೈಲು ಸೇವೆ ಒದಗಿಸುತ್ತಿದೆ. ಇಂದಿನಿಂದಲೇ ಜಾರಿಗೆ ಬರುವಂತೆ 6 ಹೆಚ್ಚುವರಿ ರೈಲು ಸೇರ್ಪಡೆಗೊಳಿಸಲಾಗಿದೆ. ನೇರಳೆ ಮಾರ್ಗದಲ್ಲಿ ಪ್ರಸ್ತುತ 9 ರೈಲುಗಳಷ್ಟೇ ಕಾರ್ಯಾಚರಣೆ ಮಾಡುತ್ತಿದ್ದವು.ಇಂದಿನಿಂದ ಒಟ್ಟು 15 ರೈಲುಗಳು ನೇರಳೆ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲಿದೆ.
ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್‌ನಿಂದ ಪ್ರಸ್ತುತ 9 ರೈಲುಗಳ ಬದಲಿಗೆ ಹೆಚ್ಚುವರಿ 15 ಮೆಟ್ರೋ ರೈಲುಗಳನ್ನು ಪ್ರಯಾಣಿಕರ ಸೇವೆಗೆ ಒದಗಿಸಲಾಗುತ್ತದೆ. ಈ 15 ರೈಲುಗಳಲ್ಲಿ 10 ರೈಲುಗಳು ಪಟ್ಟಂದೂರು, ಅಗ್ರಹಾರದ (ಐಟಿಪಿಎಲ್) ವರೆಗೆ, 4 ರೈಲುಗಳು ವೈಟ್‌ಫೀಲ್ಡ್ ಮತ್ತು 1 ರೈಲು ಬೈಯಪ್ಪನಹಳ್ಳಿ ಕಡೆಗೆ ಸಂಚರಿಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಯಾಣಿಕರ ಬೇಡಿಕೆ ಪೂರೈಸಲು ಪ್ರಸ್ತುತ, ಗರುಡಾಚಾರ್ ಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಕೊನೆಗೊಳ್ಳುವ 14 ರೈಲುಗಳಲ್ಲಿ 6 ರೈಲುಗಳನ್ನು ಪಟ್ಟಂದೂರು ಅಗ್ರಹಾರ (ITPL) ಅಥವಾ ವೈಟ್‌ಫೀಲ್ಡ್‌ವರೆಗೆ ವಿಸ್ತರಿಸಲಾಗಿದೆ. ಗರುಡಾಚಾರ್ ಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಇಳಿಯುವ ಪ್ರಯಾಣಿಕರಿಗೆ ಪಟ್ಟಂದೂರು ಅಗ್ರಹಾರ ಕಡೆಗೆ ಪ್ರಯಾಣಿಸಲು ಮುಂದಿನ ರೈಲು 3.5 ನಿಮಿಷಗಳ ಆವರ್ತನದಲ್ಲಿ ಲಭ್ಯವಿರಲಿದೆ.